ಬೆಂಗಳೂರು, ಜೂನ್ 6: ಮಾಜಿ ಶಾಸಕರು ಹಾಗೂ ಗ್ರೇಟರ್ ಬೆಂಗಳೂರು ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಎಂ. ರಮೇಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಜೆ.ಪಿ. ಭವನದಲ್ಲಿ ಗ್ರೇಟರ್ ಬೆಂಗಳೂರು ಪಕ್ಷದ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಪ್ರಮುಖ ಸಭೆ ನಡೆಯಿತು. ಮುಂಬರುವ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಚುನಾವಣೆಯ ಪೂರ್ವ ಸಿದ್ಧತೆ, ಪಕ್ಷದ ಸಂಘಟನೆ ಬಲವರ್ಧನೆ, BLA-1 ಮತ್ತು BLA-2 ನೇಮಕಾತಿ, ಅವರ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಂ. ರಮೇಶ್ ಗೌಡ ಅವರು, ಚುನಾವಣಾ ಯಶಸ್ಸಿಗೆ ಸಂಘಟನೆಯ ಬಲವರ್ಧನೆ ಹಾಗೂ ಮತದಾರರೊಂದಿಗೆ ನಿರಂತರ ಸಂಪರ್ಕ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜೊತೆಗೆ, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ನೀಡಲಾಯಿತು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಹೆಸರು ಕೈಬಿಡುವ ಪ್ರಕ್ರಿಯೆಗಳ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸಲಾಯಿತು. ಮತದಾರರ ಪಟ್ಟಿಯ ಶುದ್ಧೀಕರಣ ಮತ್ತು ಪರಿಷ್ಕರಣೆ ಕಾರ್ಯದಲ್ಲಿ BLA-1 ಹಾಗೂ BLA-2ಗಳ ಪಾತ್ರ ಮಹತ್ವದ್ದಾಗಿದ್ದು, ಪಕ್ಷದ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಯಿತು.

ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಅಫ್ರೋಜ್ ಬೇಗ್, ಮಾಜಿ ಶಾಸಕರು ಹಾಗೂ ಬೆಂಗಳೂರು ಉತ್ತರ ನಗರ ವಿಭಾಗದ ಅಧ್ಯಕ್ಷರಾದ ಇ. ಕೃಷ್ಣಪ್ಪ, ಬೆಂಗಳೂರು ಪಶ್ಚಿಮ ನಗರ ವಿಭಾಗದ ಅಧ್ಯಕ್ಷರಾದ ಟಿ. ತಿಮ್ಮೇಗೌಡ, ಬೆಂಗಳೂರು ದಕ್ಷಿಣ ನಗರ ವಿಭಾಗದ ಅಧ್ಯಕ್ಷರಾದ ಎಚ್.ಸಿ. ಕೃಷ್ಣ, ಬೆಂಗಳೂರು ಪೂರ್ವ ನಗರ ವಿಭಾಗದ ಅಧ್ಯಕ್ಷರಾದ ನಟರಾಜ ಗಂಗಾಧರ್, ಗ್ರೇಟರ್ ಬೆಂಗಳೂರು ಕಾರ್ಯಾಧ್ಯಕ್ಷರಾದ ಟಿ.ಆರ್. ತುಳಸಿರಾಮ್, ಮಹಾಪ್ರಧಾನ ಕಾರ್ಯದರ್ಶಿ ಎಸ್. ರಮೇಶ್, ಗ್ರೇಟರ್ ಬೆಂಗಳೂರು ಮಹಿಳಾ ವಿಭಾಗದ ಅಧ್ಯಕ್ಷರಾದ ಶೈಲಾ ಸಂತೋಜಿ ರಾವ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಜಿ. ವೇಲು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯ ವಿಶೇಷ ಆಕರ್ಷಣೆಯಾಗಿ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ನಾಯಕರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಂತೆ ಕರೆ ನೀಡಿದರು.
ಸಭೆಯು ಚುನಾವಣಾ ಸಿದ್ಧತೆ, ಸಂಘಟನೆ ವಿಸ್ತರಣೆ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ಮಹತ್ವದ ಮಾರ್ಗದರ್ಶನ ನೀಡುವ ಮೂಲಕ ಯಶಸ್ವಿಯಾಗಿ ನೆರವೇರಿತು. ಗ್ರೇಟರ್ ಬೆಂಗಳೂರು ಪಕ್ಷದ ಮುಸ್ಲಿಂ ಅಲ್ಪಸಂಖ್ಯಾತರ ವಿಭಾಗವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಈ ಸಭೆಯಲ್ಲಿ ವ್ಯಕ್ತಪಡಿಸಿತು.





