ಥಾಣೆ (ಮುಂಬೈ): ಮದುವೆಯಾಗಿ ಕೇವಲ 48 ದಿನಗಳಷ್ಟೇ ಕಳೆದಿದ್ದ ವೇಳೆ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಥಾಣೆ ಜಿಲ್ಲೆಯ ಅಂಬರ್ನಾಥ್ನಲ್ಲಿ ಬೆಳಕಿಗೆ ಬಂದಿದೆ. ಕುಟುಂಬಸ್ಥರ ಆರೋಪದಂತೆ, ಪತಿ ಹಾಗೂ ಅತ್ತೆ-ಮಾವನ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳವೇ ಈ ದುರ್ಘಟನೆಗೆ ಕಾರಣವಾಗಿದೆ.
ಮೃತೆಯನ್ನು ವಿಶಾಖಾ ತಿಲ್ಕರ್ (26) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ವೈದ್ಯರಾಗಿರುವ ನಿತಿನ್ ತಿಲ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ 30ರಂದು ವಿಶಾಖಾ ಮತ್ತು ನಿತಿನ್ ಅವರ ವಿವಾಹ ನೆರವೇರಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿ ಅತ್ತೆ-ಮಾವಂದಿರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದರ ಜೊತೆಗೆ, ಪತಿ ನಿತಿನ್ ಮನೆಯ ಒಳಗೆ ಮತ್ತು ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿಯ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡುತ್ತಿದ್ದನು ಎನ್ನಲಾಗಿದೆ. ವಿಶಾಖಾಳ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಗೌಪ್ಯತೆಯನ್ನು ಸಂಪೂರ್ಣವಾಗಿ ಕಸಿದುಕೊಂಡು, ಅನುಮಾನ ಮತ್ತು ನಿಯಂತ್ರಣದ ವಾತಾವರಣದಲ್ಲಿ ಬದುಕುವಂತೆ ಮಾಡಲಾಗುತ್ತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿವಾಹದ ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಹಣ ಮತ್ತು ಚಿನ್ನಾಭರಣ ಸಿಗಲಿಲ್ಲ ಎಂಬ ಕಾರಣಕ್ಕೆ ಅತ್ತೆ ಛಾಯಾ ಹಾಗೂ ಮೈದುನ ನಿನಾದ್ ಸಹ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಯಾರೊಂದಿಗಾದರೂ ಮಾತನಾಡಿದರೂ ಪತಿ ಕೋಪಗೊಂಡು ಹಲ್ಲೆ ನಡೆಸುತ್ತಿದ್ದನೆಂಬ ಆರೋಪವೂ ಕೇಳಿಬಂದಿದೆ.
ಆತ್ಮಹತ್ಯೆಗೆ ಎರಡು ದಿನಗಳ ಮೊದಲು, ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ್ದ ಕಾರಣಕ್ಕೆ ವಿಶಾಖಾಳನ್ನು ಪತಿ ಅಮಾನುಷವಾಗಿ ಥಳಿಸಿದ್ದನೆಂದು ಕುಟುಂಬಸ್ಥರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಸೇರಿದಂತೆ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ. ನವವಿವಾಹಿತೆಯ ಸಾವಿನ ಈ ಘಟನೆ ವರದಕ್ಷಿಣೆ ಕಿರುಕುಳ ಮತ್ತು ಗೃಹ ಹಿಂಸೆಯ ಗಂಭೀರತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.






