ಜನವರಿ 15ರಂದು ರಾಜ್ಯಾದ್ಯಂತ ತೆರೆಗೆ; ರಿಕ್ಷಾ ಚಾಲಕರಿಗೆ ಚಿತ್ರ ಸಮರ್ಪಣೆ – ಹಾಡಿನ ಚಿತ್ರೀಕರಣಕ್ಕೆ ಒಂದು ಕೋಟಿ ರೂ. ವೆಚ್ಚ!
ಮಂಗಳೂರು: ಆಟೋ ರಿಕ್ಷಾ ಚಾಲಕರು ಕೇವಲ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವವರಲ್ಲ; ಅವರಿಗೂ ಸ್ವಾಭಿಮಾನವಿದೆ, ಕುಟುಂಬವಿದೆ, ಕನಸುಗಳಿವೆ, ಬದುಕಿನ ಸವಾಲುಗಳಿವೆ ಎಂಬ ವಿಭಿನ್ನ ಸಂದೇಶದೊಂದಿಗೆ ಮೂಡಿಬಂದಿರುವ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ತುಳು ಚಲನಚಿತ್ರದ ಟೀಸರ್ ಭಾರತ್ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.
ನವದುರ್ಗ ಫಿಲ್ಮ್ಸ್ ಲಾಂಛನದಲ್ಲಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ನಿರ್ಮಿಸಿರುವ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಚಿತ್ರದ ಟೀಸರ್ ಹಾಗೂ ಹಾಡಿನ ಪ್ರದರ್ಶನ ನಡೆಯಿತು.

ಚಿತ್ರದ ನಿರ್ಮಾಣ ಮೇಲ್ವಿಚಾರಕಿ ಹಾಗೂ ಅಭಿಮತ ಟಿವಿಯ ಮುಖ್ಯಸ್ಥೆ ಡಾ. ಮಮತಾ ಪಿ. ಶೆಟ್ಟಿ ಮಾತನಾಡಿ, ಸಿನಿಮಾ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ನೂರಾರು ಕುಟುಂಬಗಳ ಬದುಕಿಗೆ ಆಸರೆಯಾಗಿರುವ ಉದ್ಯಮ. ನಿರ್ಮಾಪಕರು ಕಲಾವಿದರು ಹಾಗೂ ತಂತ್ರಜ್ಞರ ಪಾಲಿನ ಅನ್ನದಾತರು. ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಚಿತ್ರದ ಚಿತ್ರೀಕರಣ 54 ದಿನಗಳ ಕಾಲ ನಡೆದಿದ್ದು, ನಿರ್ಮಾಪಕರು ಚಿತ್ರತಂಡಕ್ಕೆ ಯಾವುದೇ ಕೊರತೆಯಾಗದಂತೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಉತ್ತಮ ಕಥೆಯನ್ನು ನಿರ್ಮಾಪಕರ ಮುಂದಿಟ್ಟಾಗ ಅದಕ್ಕೆ ಸ್ಪಂದಿಸಿದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರು ಸಮಾಜಸೇವೆಯ ಜತೆಗೆ ಕಲಾವಿದರ ಬದುಕು ಹಾಗೂ ಸಿನಿಮಾ ಕ್ಷೇತ್ರದ ಬೆಳವಣಿಗೆಯ ಬಗ್ಗೆಯೂ ಕಾಳಜಿ ವಹಿಸಿ ಚಿತ್ರ ನಿರ್ಮಾಣಕ್ಕೆ ಮುಂದಾದರು. ಚಿತ್ರ ನಿರ್ಮಾಣದ ಹಿಂದೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಕಲಾವಿದರಷ್ಟೇ ಅಲ್ಲದೆ, ತೆರೆಯ ಹಿಂದೆ ಹಗಲಿರುಳು ಶ್ರಮಿಸಿದ ಅನೇಕ ಪ್ರತಿಭೆಗಳ ಪರಿಶ್ರಮವಿದೆ. ಸುಮಾರು ನಾಲ್ಕು ವರ್ಷಗಳಿಂದ ಸೂಕ್ತ ನಿರ್ಮಾಪಕರಿಗಾಗಿ ಕಾಯುತ್ತಿದ್ದ ನಿರ್ದೇಶಕ ಇಸ್ಮಾಯಿಲ್ ಅವರ ಪರಿಶ್ರಮಕ್ಕೆ ಈ ಚಿತ್ರದ ಮೂಲಕ ಫಲ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ, ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿರುವ ನಾನು, ವಿಭಿನ್ನ ಹಾಗೂ ಉತ್ತಮ ಕಥೆಯೊಂದನ್ನು ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕನ್ಯಾನ ಸದಾಶಿವ ಶೆಟ್ಟಿಯವರ ಪರಿಚಯವಾಯಿತು. ಕಥೆ ಕೇಳಿದ ಅವರು ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದರು. ಅದರ ಫಲವಾಗಿ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ ಎಂದರು.
ಇದು ಕುಟುಂಬ ಸಮೇತ ಕುಳಿತು ನಗುನಗುತ್ತಾ ವೀಕ್ಷಿಸಬಹುದಾದ ಹಾಸ್ಯಮಯ ಚಿತ್ರ. ಮನರಂಜನೆಯ ಜತೆಗೆ ಆಟೋ ರಿಕ್ಷಾ ಚಾಲಕರ ಬದುಕಿನ ಸ್ವಾಭಿಮಾನ ಹಾಗೂ ಅವರ ಕುಟುಂಬದ ಭಾವನೆಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಜನವರಿ 15ರಂದು ಸಿನಿಮಾ ತೆರೆಗೆ ಬರಲಿದ್ದು, ಪ್ರೇಕ್ಷಕರು ಹಾಗೂ ತುಳುನಾಡಿನ ಸಿನಿಮಾ ಅಭಿಮಾನಿಗಳ ಪ್ರೋತ್ಸಾಹ ಅಗತ್ಯ ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಚಿತ್ರದ ಟೀಸರ್ ಮತ್ತು ಹಾಡು ಉತ್ತಮವಾಗಿ ಮೂಡಿಬಂದಿವೆ. ಇಸ್ಮಾಯಿಲ್ ಅವರು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಎರಡನೇ ಚಿತ್ರವೂ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಶುಭ ಹಾರೈಸಿದರು.
ಪಣಂಬೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ವಲಾಲ್ ಮಾತನಾಡಿ, ಚಿತ್ರದ ಟೀಸರ್ನ ಗುಣಮಟ್ಟ ಉತ್ತಮವಾಗಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರೇಕ್ಷಕರಿಗೆ ಒಳ್ಳೆಯ ಚಿತ್ರವನ್ನು ನೀಡುವ ಪ್ರಯತ್ನ ಮಾಡಿದ್ದಾರೆ ಎಂದರು.
ನ್ಯಾಯವಾದಿ ಅರುಣ್ ಬಂಗೇರ ಮಾತನಾಡಿ, ಟೀಸರ್ ತುಂಬಾ ಇಷ್ಟವಾಯಿತು. ಚಿತ್ರವೂ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಹಾಡಿನ ಚಿತ್ರೀಕರಣಕ್ಕೆ ಒಂದು ಕೋಟಿ ರೂ. ವೆಚ್ಚ
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಹಾಡುಗಳ ಚಿತ್ರೀಕರಣವನ್ನು ವಿಶೇಷವಾಗಿ ರೂಪಿಸಲಾಗಿದೆ. ಅದರಲ್ಲೂ ಒಂದು ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಕರಾವಳಿಯ ಹೊಸ ಪ್ರತಿಭೆಗಳು ಹಾಗೂ ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಗೀತ ನಿರ್ದೇಶನವನ್ನು ಮಣಿಕಾಂತ್ ಕದ್ರಿ ಮತ್ತು ಸಮೀರ್ ಮುಡಿಪು ನಿರ್ವಹಿಸಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಎ.ಕೆ. ಕಾರ್ಲ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ.
ಕರಾವಳಿಯ ಹಾಸ್ಯ ಕಲಾವಿದರ ಸಮಾಗಮ
ಚಿತ್ರದಲ್ಲಿ ದೀಪಕ್ ರೈ ಪಾಣಾಜೆ, ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ, ಹೃದನ್ ಶೆಟ್ಟಿ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರವಿರಾಮಕುಂಜ, ಪುಷ್ಪರಾಜ್ ಬೊಳ್ಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಮೈಮ್ ರಾಮ್ದಾಸ್, ಉಮೇಶ್ ಮಿಜಾರ್, ಅನಿಲ್ ರಾಜ್ ಉಪ್ಪಳ, ಮಾನಸಿ ಸುಧೀರ್, ಸಾಯಿ ಕೃಷ್ಣ, ಸತೀಶ್ ಬಂದಲೆ ಸೇರಿದಂತೆ ಕರಾವಳಿಯ ಹೆಸರಾಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಆಟೋ ರಿಕ್ಷಾ ಚಾಲಕರಿಗೆ ವಿಶೇಷ ಅರ್ಪಣೆ
ಆಟೋ ರಿಕ್ಷಾ ಚಾಲಕರು ಅಸಹಾಯಕ ವರ್ಗದವರಲ್ಲ; ಅವರು ಸ್ವಾಭಿಮಾನದಿಂದ ಬದುಕುವ ಶ್ರಮಜೀವಿಗಳು ಎಂಬ ಆಶಯವನ್ನು ಚಿತ್ರದ ಕಥಾಹಂದರ ಹೊಂದಿದೆ. ಇದೇ ಕಾರಣಕ್ಕೆ ಈ ಚಿತ್ರವನ್ನು ಅಖಿಲ ಕರ್ನಾಟಕ ಆಟೋ ರಿಕ್ಷಾ ಚಾಲಕರಿಗೆ ಅರ್ಪಿಸಲಾಗಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ.
ಜನವರಿ 15ರಂದು ಕರ್ನಾಟಕದಾದ್ಯಂತ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಚಿತ್ರ ಬಿಡುಗಡೆಯಾಗಲಿದೆ.
ಸಮಾರಂಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಲಕ್ಷ್ಮಣ್, ಅಡ್ಯಾರ್ ಮಾಧವ ನಾಯ್ಕ್, ಸತೀಶ್ ಬಂದಲೆ, ಪಮ್ಮಿ ಕೊಡಿಯಾಲ್ ಬೈಲ್, ಡಾ. ಅಬೂಬಕರ್ ಸಿದ್ದಿಕ್ ಅಡ್ಡೂರು, ಡಾ. ಕಿರಣ್ ಕುಮಾರ್, ಎನ್. ನಾಗರಾಜ್, ಶರಣ್ ರಾಜ್ ಕಾಸರಗೋಡು, ನಿತಿನ್ ರೈ ಕುಕ್ಕುವಳ್ಳಿ, ಪತ್ರಕರ್ತರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಬಾಳ ಜಗನ್ನಾಥ ಶೆಟ್ಟಿ, ಶಮೀರ್ ಮುಡಿಪು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಷಷ್ಠೀಶ್ ಪಿ. ಶೆಟ್ಟಿ ಸ್ವಾಗತಿಸಿದರು. ವಿ.ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.



