ಮಂಗಳೂರು: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಂಗಳೂರಿನಲ್ಲಿ ಕೇಳಿಬಂದಿದೆ. ರಾತ್ರಿ ವೇಳೆ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್, ಎಟಿಎಂ ಕಾರ್ಡ್ ಹಾಗೂ ಹಣ ಕಸಿದುಕೊಂಡು ಒಟ್ಟು 4,000 ರೂ. ವಸೂಲಿ ಮಾಡಿದ ಆರೋಪದಡಿ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.
ವಿಟ್ಲ ಮುಡ್ನೂರು ಮೂಲದ ರವಿರಾಜ್ ದೂರು ನೀಡಿದ ವ್ಯಕ್ತಿಯಾಗಿದ್ದು, ಮಂಗಳೂರಿನ ಪಾಂಡೇಶ್ವರದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಂಕನಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ದುಡಿಯುತ್ತಿದ್ದಾರೆ.
ದೂರಿನ ಪ್ರಕಾರ, ಆಗಸ್ಟ್ 25ರಂದು ರಾತ್ರಿ ಸುಮಾರು 10 ಗಂಟೆಗೆ ನೆಹರೂ ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ರವಿರಾಜ್ ಅವರನ್ನು ಆರ್ಟಿಒ ಕಚೇರಿ ಸಮೀಪ ಹೊಯ್ಸಳ ಗಸ್ತು ವಾಹನದಲ್ಲಿ ಬಂದ ಮೂವರು ಸಿಬ್ಬಂದಿ ತಡೆದಿದ್ದಾರೆ. ಪಾಂಡೇಶ್ವರ ಠಾಣೆಯ ಚಾಲಕ ಹಿರಣ್ಣ ಬೆನ್ನಿ ಹಾಗೂ ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮಾಕಾಂತ್ ಎಂದು ಗುರುತಿಸಲಾದವರು ರವಿರಾಜ್ ಅವರ ಭುಜ ಮತ್ತು ಕಾಲಿಗೆ ಲಾಠಿಯಿಂದ ಹೊಡೆದು, ಮೊಬೈಲ್ ಫೋನ್ ಹಾಗೂ ಕವರ್ನಲ್ಲಿದ್ದ 300 ರೂ. ಕಸಿದುಕೊಂಡಿದ್ದಾರೆ. ಅಲ್ಲದೆ, ಅಸಭ್ಯವಾಗಿ ನಿಂದಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತೆ ಅದೇ ಸ್ಥಳದಲ್ಲಿ ತಡೆದು ಹಣಕ್ಕೆ ಬೇಡಿಕೆ!
ಆಗಸ್ಟ್ 27ರಂದು ಇದೇ ಸ್ಥಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿ ರವಿರಾಜ್ ಅವರನ್ನು ತಡೆದು ಮೊಬೈಲ್, ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ನ ಎಟಿಎಂ ಕಾರ್ಡ್ಗಳು, 1,000 ರೂ. ನಗದು ಹಾಗೂ ದ್ವಿಚಕ್ರ ವಾಹನದ ಕೀಲಿಯನ್ನು ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ರಾತ್ರಿ ಸುಮಾರು 11.30ರ ವೇಳೆಗೆ ಮತ್ತೆ ಸ್ಥಳಕ್ಕೆ ಬಂದ ಸಿಬ್ಬಂದಿ ರವಿರಾಜ್ ಅವರನ್ನು ಬಲವಂತವಾಗಿ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅವರ ಮೊಬೈಲ್ ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿರುವ ಹಣದ ವಿವರ ಪರಿಶೀಲಿಸಿ, ಖಾತೆಯಲ್ಲಿ ಸುಮಾರು 5,000 ರೂ. ಇರುವುದನ್ನು ಕಂಡು 2,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಮಂಗಳಾದೇವಿ ದೇವಸ್ಥಾನದ ಸಮೀಪದ ಎಸ್ಬಿಐ ಎಟಿಎಂಗೆ ಕರೆದೊಯ್ದು ಬಲವಂತವಾಗಿ ಹಣ ಡ್ರಾ ಮಾಡಿಸಿ ಒಟ್ಟು 3,000 ರೂ. ಪಡೆದುಕೊಂಡು ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎಂದು ರವಿರಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ನವೆಂಬರ್ 4ರಂದು ಮತ್ತೆ ಮೊಬೈಲ್ ಕಸಿದುಕೊಂಡ ಆರೋಪ
ನವೆಂಬರ್ 4ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ರವಿರಾಜ್ ಅವರನ್ನು ಮತ್ತೆ ತಡೆದ ಸಿಬ್ಬಂದಿ ವಾಹನದ ಕೀಲಿ ಕಸಿದುಕೊಂಡು ಹೊಯ್ಸಳ ವಾಹನದಲ್ಲಿ ಪಾಂಡೇಶ್ವರದ ಮಾಲ್ ಒಂದರ ಬಳಿಗೆ ಕರೆದೊಯ್ದಿದ್ದಾರೆ. ಈ ವೇಳೆ ಮೊಬೈಲ್ ಫೋನ್ ಕಸಿದುಕೊಂಡು ಠಾಣೆಗೆ ಬಂದು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಹಿಂದಿರುಗಿಸಲು ದಂಡ ಪಾವತಿಸಬೇಕೆಂದು ಮೊದಲು ತಿಳಿಸಿ, ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ಸಾಧ್ಯವಿಲ್ಲ, ಠಾಣೆಗೆ ಬಂದು ಮಾತನಾಡುವುದಾಗಿ ರವಿರಾಜ್ ತಿಳಿಸಿದ್ದಾರೆ. ಬಳಿಕ ಅದೇ ರಾತ್ರಿ ಕರೆ ಮಾಡಿ ದ್ವಿಚಕ್ರ ವಾಹನವನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪೊಲೀಸರ ವಿರುದ್ಧವೇ ಗಂಭೀರ ಆರೋಪ: ತನಿಖೆಗೆ ಒತ್ತಾಯ
ಸಾರ್ವಜನಿಕರ ರಕ್ಷಣೆ ಮತ್ತು ಕಾನೂನು ಪಾಲನೆಯ ಜವಾಬ್ದಾರಿ ಹೊಂದಿರುವ ಪೊಲೀಸ್ ಸಿಬ್ಬಂದಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ತಮ್ಮ ಮೇಲೆ ನಡೆದ ಹಲ್ಲೆ, ಬೆದರಿಕೆ, ಕಿರುಕುಳ, ಮೊಬೈಲ್ ಹಾಗೂ ಹಣ ಕಸಿದುಕೊಂಡಿರುವ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರವಿರಾಜ್ ದೂರು ನೀಡಿದ್ದಾರೆ.
ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

