ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ನಿರಂತರ ಜನಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕರಣಗೊಳಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು.
ಈ ಹಿಂದೆ ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಬಸ್ ನಿಲ್ದಾಣವನ್ನು ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕರ್ತರು ತಮ್ಮ ಶ್ರಮ ಹಾಗೂ ಸ್ವಂತ ದುಡಿಮೆಯಿಂದ ನವೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನಂತೂರಿನಿಂದ ಕುಡುಪು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಬಸ್ ನಿಲ್ದಾಣ ಹಲವು ವರ್ಷಗಳಿಂದ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿತ್ತು. ಇದೀಗ ಸೇವಾ ಸಂಕಲ್ಪ ಅಭಿಯಾನದ ಮೂಲಕ ಇದನ್ನು ನವೀಕರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಾರ್ವಜನಿಕರ ದೈನಂದಿನ ಬದುಕಿಗೆ ನೇರವಾಗಿ ಸ್ಪಂದಿಸುವ ಇಂತಹ ಸೇವಾ ಕಾರ್ಯಗಳು ಜನಪರ ರಾಜಕಾರಣದ ಉತ್ತಮ ಉದಾಹರಣೆಯಾಗಿವೆ. ಮುಂದಿನ ದಿನಗಳಲ್ಲಿ ಈ ಬಸ್ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರಿಗೆ ಅನುಕೂಲವಾಗುವಂತಾದರೆ, ಸೇವಾ ಸಂಕಲ್ಪ ಅಭಿಯಾನದ ಆಶಯವೂ ಸಾರ್ಥಕವಾಗಲಿದೆ. ಈ ಜನಪರ ಕಾರ್ಯಕ್ಕಾಗಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಜಿಲ್ಲಾ ಕಾರ್ಯದರ್ಶಿ ದೀಪಿಕಾ ಮನೋಜ್, ಮಂಡಲ ಒಬಿಸಿ ಮೋರ್ಚಾದ ಪ್ರಭಾರ ಅಧ್ಯಕ್ಷ ಅರುಣ್ ಉರ್ವ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ದೇವಾಡಿಗ ಹಾಗೂ ಸುಕೇಶ್ ಅಳಪೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ ಹಾಗೂ ಕಾವ್ಯ ನಟರಾಜ್ ಆಳ್ವ, ಪೂರ್ವ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಚಂದ್ರ, ದಕ್ಷಿಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ ನಿಡ್ಡೆಲ್ ಸೇರಿದಂತೆ ಪ್ರಮುಖರಾದ ರಾಘವೇಂದ್ರ, ಅಜಯ್ ಕುಲಶೇಖರ, ಜಯಕುಮಾರ್, ರಾಮ್ ಪ್ರಸಾದ್, ಪ್ರವೀಣ್ ಗುಂಡಳಿಕೆ ಹಾಗೂ ಮಂಡಲ ಮತ್ತು ಜಿಲ್ಲಾ ಮಟ್ಟದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

