ಮಂತ್ರಾಲಯ / ಹಂಪಿ, ಸೆ.27: ಕರ್ನಾಟಕ ಸರ್ಕಾರವು ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕ, ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ವತಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸರ್ಕಾರದ ಘೋಷಣೆಗೆ ಹರ್ಷ ವ್ಯಕ್ತಪಡಿಸಲಾಯಿತು.
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿರ್ಧಾರ ಕೈಗೊಂಡಿರುವುದು ತುಳುವರ ಹಲವು ದಶಕಗಳ ಹೋರಾಟಕ್ಕೆ ದೊರೆತ ಮಹತ್ವದ ಮಾನ್ಯತೆಯಾಗಿದೆ ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳು ಸೂರ್ಯ-ಚಂದ್ರ ಚಿಹ್ನೆಯುಳ್ಳ ತುಳು ಬಾವುಟ ಹಾಗೂ ಕೆಂಪು ತುಳು ಶಾಲು ಧರಿಸಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದರು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು, ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಯಾಗಬೇಕು ಮತ್ತು ಸರ್ಕಾರದ ಘೋಷಣೆ ಕೇವಲ ಕಾಗದದ ಮೇಲಿನ ನಿರ್ಧಾರವಾಗದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಲಾಯಿತು.
ಹಂಪಿ, ಅಂಜನಾದ್ರಿಯಲ್ಲೂ ತುಳು ಬಾವುಟ ಪ್ರದರ್ಶನ
ಮಂತ್ರಾಲಯದ ಬಳಿಕ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಗೂ ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧವಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ವೇದಿಕೆಯ ಪದಾಧಿಕಾರಿಗಳು ಅಲ್ಲಿ ತುಳು ಬಾವುಟವನ್ನು ಪ್ರದರ್ಶಿಸಿ ತುಳು ಭಾಷೆ ಮತ್ತು ಸಂಸ್ಕೃತಿಯ ವೈಶಿಷ್ಟ್ಯವನ್ನು ಪರಿಚಯಿಸಿದರು.
ಸೂರ್ಯ-ಚಂದ್ರ ಚಿಹ್ನೆಯುಳ್ಳ ಕೆಂಪು ತುಳು ಬಾವುಟವನ್ನು ಹಿಡಿದು ಹಂಪಿಗೆ ಆಗಮಿಸಿದ್ದ ಪ್ರವಾಸಿಗರೊಂದಿಗೆ ತುಳು ಭಾಷೆ, ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಪರಂಪರೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
ವಿದೇಶಿ ಪ್ರವಾಸಿಗರು ತುಳು ಬಾವುಟ ಹಾಗೂ ಅದರಲ್ಲಿರುವ ಸೂರ್ಯ-ಚಂದ್ರ ಚಿಹ್ನೆಯ ಬಗ್ಗೆ ಕುತೂಹಲದಿಂದ ವಿಚಾರಿಸಿ, ತುಳುನಾಡಿನ ವಿಶಿಷ್ಟ ಸಂಸ್ಕೃತಿಯ ಕುರಿತು ಮಾಹಿತಿ ಪಡೆದುಕೊಂಡರು. ಕೆಲ ಪ್ರವಾಸಿಗರು ತುಳು ಬಾವುಟ ಹಿಡಿದು ಛಾಯಾಚಿತ್ರಗಳಿಗೆ ಪೋಸ್ ನೀಡಿದ್ದು ವಿಶೇಷವಾಗಿತ್ತು.

8ನೇ ಪರಿಚ್ಛೇದ ಸೇರ್ಪಡೆವರೆಗೆ ಹೋರಾಟ
“ಜಾತಿ-ಮತ, ಭೇದ-ಭಾವವಿಲ್ಲದೆ ಹಲವು ಭಾಷೆಗಳು, ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಒಳಗೊಂಡಿರುವ ಈ ಪುಣ್ಯಭೂಮಿ ಬೆರ್ಮೆರ್ ಸೃಷ್ಟಿಯ ನಾಡು ತುಳುನಾಡು. ಕರ್ನಾಟಕ ಸರ್ಕಾರದ ತುಳು ಭಾಷಾ ಘೋಷಣೆಯ ಸಂಭ್ರಮವನ್ನು ಹಂಪಿಯಂತಹ ವಿಶ್ವ ಪರಂಪರೆಯ ತಾಣದಲ್ಲಿ ಹಂಚಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ತುಳು ಭಾಷೆಗೆ ದೊರೆತಿರುವ ಈ ಮಾನ್ಯತೆಯನ್ನು ಸ್ವಾಗತಿಸುತ್ತೇವೆ. ಆದರೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ. ತುಳು ಭಾಷೆ ಹಾಗೂ ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ತುಳುನಾಡ ರಕ್ಷಣಾ ವೇದಿಕೆ ನಿರಂತರವಾಗಿ ಮುಂದುವರಿಸಲಿದೆ” ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಸಚಿನ್ ಕುಮಾರ್ ಶೆಟ್ಟಿ, ಅಜಯ್ ಕುಲಾಲ್ ಹಾಗೂ ರಂಜಿತ್ ಕುಲಾಲ್ ಉಪಸ್ಥಿತರಿದ್ದರು.

