ಮಂಗಳೂರು, ಸೆ.3: ಆನ್ಲೈನ್ ಮೂಲಕ ಖರೀದಿಸಿದ ಮೊಟ್ಟೆಯಲ್ಲಿ ಹುಳ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಮಂಗಳೂರಿನ ಫಳ್ನೀರ್ನಲ್ಲಿರುವ ಬ್ಲಿಂಕಿಟ್ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಿಂಕಿಟ್ ಸಂಸ್ಥೆಯ ಮೂಲಕ ಗ್ರಾಹಕರೊಬ್ಬರು ಮೊಟ್ಟೆಗಳನ್ನು ಆನ್ಲೈನ್ನಲ್ಲಿ ಖರೀದಿಸಿದ್ದರು. ಮನೆಗೆ ತಂದು ಮೊಟ್ಟೆ ಒಡೆದಾಗ ಅದರೊಳಗೆ ಹುಳ ಪತ್ತೆಯಾಗಿದೆ ಎಂದು ಆರೋಪಿಸಿ ಗ್ರಾಹಕರು ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗುರುವಾರ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಮಳಿಗೆಯಲ್ಲಿದ್ದ ಮೊಟ್ಟೆಗಳ ಸಂಗ್ರಹಣೆ, ಪ್ಯಾಕಿಂಗ್ ವ್ಯವಸ್ಥೆ ಹಾಗೂ ಆಹಾರ ಸಾಮಗ್ರಿಗಳನ್ನು ಇಡಲಾಗಿದ್ದ ಸ್ಥಳವನ್ನು ಪರಿಶೀಲಿಸಿದರು. ಈ ವೇಳೆ ಕೆಲವು ಒಡೆದ ಮೊಟ್ಟೆಗಳಿದ್ದ ಪ್ಯಾಕೆಟ್ಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅವುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಮಳಿಗೆ ಸಿಬ್ಬಂದಿಗೆ ಸೂಚಿಸಲಾಯಿತು.
ಮೊಟ್ಟೆಗಳು ಸೇರಿದಂತೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಸಂಗ್ರಹಣಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದ ಅದನ್ನು ತಾತ್ಕಾಲಿಕವಾಗಿ ಮುಚ್ಚಿ ಸೀಲ್ ಮಾಡುವ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಗ್ರಾಹಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಪದಾರ್ಥಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಆಹಾರ ಸುರಕ್ಷತಾ ಇಲಾಖೆಯ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಿಂಕಿಟ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿ, ಮೊಟ್ಟೆಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಗ್ರಾಹಕರಿಗೆ ವಿತರಿಸಿದ ಆಹಾರ ಸಾಮಗ್ರಿಗೆ ಸಂಬಂಧಿಸಿದಂತೆ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಲಾಗುವುದು. ಅಗತ್ಯವಿದ್ದಲ್ಲಿ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ಪರಿಶೀಲನೆಯ ಬಳಿಕ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
