ಪುತ್ತೂರು, ಸೆ.2: ಪುತ್ತೂರು ಕಸಬ ಗ್ರಾಮದ ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಪರಸ್ಪರ ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 1ರಂದು ಮಧ್ಯಾಹ್ನ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಗುಂಪು ಸೇರಿಕೊಂಡು ಗಲಾಟೆ ನಡೆಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಪಡೆದ ಪೊಲೀಸರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕೆಲವರು ಪರಸ್ಪರ ಕೈಕೈ ಮಿಲಾಯಿಸಿಕೊಂಡು ಗಲಾಟೆ ನಡೆಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರು ಗಲಾಟೆ ನಡೆಸುತ್ತಿದ್ದವರಿಗೆ ತಿಳುವಳಿಕೆ ನೀಡಿ ಸಾರ್ವಜನಿಕ ಶಾಂತಿ ಕಾಪಾಡುವಂತೆ ಸೂಚಿಸಿದರೂ, ಅವರು ಕಲಹವನ್ನು ಮುಂದುವರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಡೂರು ಗ್ರಾಮದ ಪ್ರವೀಣ್ ಆಚಾರ್ಯ, ಕೂರ್ನಡ್ಕದ ರವೂಫ್ ಹಾಗೂ ಬೋಳ್ವಾರದ ಹಕೀಂ ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2026, ಕಲಂ 194(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

