ಪಾಂಡುಕಲ್ಲು, ಆ.30: ಶಿವಪುರ ಪಾಂಡುಕಲ್ಲು ಬಡ್ಕಿಲ್ಲಾಯ ಮನೆತನದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 52ನೇ ಆರಾಧನಾ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ.30ರಂದು ಪಟ್ಟಾಭಿ ನಿಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ವೇದಮೂರ್ತಿ ಬ್ರಹ್ಮಶ್ರೀ ಪಾಂಡುಕಲ್ಲು ನರಸಿಂಹ ಭಟ್ಟರ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತಿಪೂರ್ವಕ ಸೇವೆಗಳು ನಡೆದವು.
ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ ನಡೆಯಿತು. ಬಳಿಕ ಶ್ರೀ ರಾಯರ ಭಕ್ತವೃಂದದವರಿಂದ ಭಜನಾ ಕಾರ್ಯಕ್ರಮ ಜರುಗಿತು. ಭಕ್ತರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ನಾಮಸ್ಮರಣೆಯೊಂದಿಗೆ ಭಕ್ತಿಭಾವ ಮೆರೆದರು.
ಈ ಸಂದರ್ಭದಲ್ಲಿ ಹರಿದಾಸ ಬಡ್ಕಿಲ್ಲಾಯ ಚಂದ್ರಶೇಖರ ರಾಯರು ‘ಸತ್ಯ, ಧರ್ಮ, ಋತ’ ಎಂಬ ವಿಷಯದ ಕುರಿತು ಮಾತನಾಡಿ, ಮಾನವ ಜೀವನದಲ್ಲಿ ಸತ್ಯ ಮತ್ತು ಧರ್ಮದ ಮಹತ್ವವನ್ನು ವಿವರಿಸಿದರು.
ಆರಾಧನಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಬಡ್ಕಿಲ್ಲಾಯ ಲಲಿತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಮತ್ತೋರ್ವ ಗೌರವಾಧ್ಯಕ್ಷೆ ಶ್ರೀಮತಿ ಬಡ್ಕಿಲ್ಲಾಯ ಸುಶೀಲಾ ಆರ್. ರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಬಡ್ಕಿಲ್ಲಾಯ ವಸಂತ ರಾವ್, ಬಡ್ಕಿಲ್ಲಾಯ ರವೀಂದ್ರ ರಾವ್, ಬಡ್ಕಿಲ್ಲಾಯ ಆದರ್ಶ ರಾವ್ ಹಾಗೂ ಬಡ್ಕಿಲ್ಲಾಯ ಶಿವಪ್ರಸಾದ ರಾವ್ ಅವರು ವಿವಿಧ ವಿಭಾಗಗಳ ಉಸ್ತುವಾರಿ ವಹಿಸಿ ಆರಾಧನಾ ಮಹೋತ್ಸವದ ಯಶಸ್ಸಿಗೆ ಸಹಕರಿಸಿದರು.
ಆರಾಧನಾ ಮಹೋತ್ಸವದ ಪ್ರಧಾನ ವ್ಯವಸ್ಥಾಪಕ ಡಾ. ಬಡ್ಕಿಲ್ಲಾಯ ರಾಘವೇಂದ್ರ ರಾವ್ ಸ್ವಾಗತಿಸಿದರು. ಸಹ ವ್ಯವಸ್ಥಾಪಕಿ ಡಾ. ಬಡ್ಕಿಲ್ಲಾಯ ಪ್ರತಿಮಾ ಆರ್. ರಾವ್ ವಂದನಾರ್ಪಣೆ ನೆರವೇರಿಸಿದರು.
ಭಕ್ತರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಅಭಿಮಾನಿಗಳ ಸಹಕಾರದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತಿಪೂರ್ಣ ಹಾಗೂ ಸಾರ್ಥಕವಾಗಿ ಸಂಪನ್ನಗೊಂಡಿತು.
ವರದಿ: ಹರಿದಾಸ ಬಿ.ಸಿ. ರಾವ್, ಶಿವಪುರ
ಹವ್ಯಾಸಿ ಪತ್ರಕರ್ತ

