ಉಡುಪಿ, ಆ.18: ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ–ವಿಚಾರ, ಜಾನಪದ ಕಲೆಗಳು ಹಾಗೂ ವಿಶಿಷ್ಟ ಜೀವನ ಪದ್ಧತಿಗಳು ಇಡೀ ದೇಶವೇ ಹೆಮ್ಮೆಪಡುವಂತಹ ಶ್ರೀಮಂತ ಪರಂಪರೆಯಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಅಮೂಲ್ಯ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಮುಖಂಡ ಸೂರಜ್ ನಾಯಕ್ ಸೋನಿ ಹೇಳಿದರು.

ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಹೊಂಬಾಳೆ ಅರಳಿಸಿ ಮಾತನಾಡಿದ ಅವರು, ತುಳುನಾಡಿನ ಸಂಸ್ಕೃತಿ ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ, ನಮ್ಮ ನೆಲ, ನುಡಿ, ಬದುಕು, ಪ್ರಕೃತಿ ಹಾಗೂ ಸಾಮಾಜಿಕ ಸಂಬಂಧಗಳೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಜೀವನ ಪರಂಪರೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ತುಳುನಾಡು ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ತುಳುನಾಡಿನ ಸಂಸ್ಕೃತಿ ಜಗತ್ತೇ ಮೆಚ್ಚುವಂತದ್ದು: ವಿನಯ ಕುಮಾರ್ ಸೊರಕೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ತುಳುನಾಡಿನ ಸಂಪ್ರದಾಯ, ಪದ್ಧತಿ, ಸಂಸ್ಕಾರ ಹಾಗೂ ಆಚಾರ–ವಿಚಾರಗಳು ವಿಶಿಷ್ಟವಾಗಿದ್ದು, ಜಗತ್ತೇ ಮೆಚ್ಚುವಂತಹ ಶ್ರೀಮಂತ ಪರಂಪರೆಯನ್ನು ಹೊಂದಿವೆ.ಎಂದರು
ತುಳು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ ಪ್ರಾಧಾನ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ತುಳುನಾಡಿನ ಕಲೆ, ಸಾಹಿತ್ಯ, ಜಾನಪದ ಹಾಗೂ ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸಲು ಸಂಘಟಿತ ಪ್ರಯತ್ನ ಅಗತ್ಯ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತಿ ಉಳಿಸಿ ಬೆಳೆಸುವುದರಿಂದ ಪ್ರಜ್ಞಾವಂತ ಸಮಾಜ ನಿರ್ಮಾಣ
ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ಮಾತನಾಡಿ, ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಿರುವ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಆಚಾರ–ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ. ಯುವಜನರನ್ನು ನಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಸಾಂಸ್ಕೃತಿಕ ಅರಿವು ಹೆಚ್ಚಿಸುವ ಮೂಲಕ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.
‘ತುಳುನಾಡು ವಾರ್ತೆ ಟಿವಿ ಚಾನೆಲ್’ ಲೋಕಾರ್ಪಣೆ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ‘ತುಳುನಾಡು ವಾರ್ತೆ’ ಪತ್ರಿಕೆ ಅರ್ಪಿಸುವ ‘ತುಳುನಾಡು ವಾರ್ತೆ ಟಿವಿ ಚಾನೆಲ್’ ಅನ್ನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ತುಳುನಾಡಿನ ಜನಜೀವನ, ಸಂಸ್ಕೃತಿ, ಕಲೆ, ಸಾಹಿತ್ಯ, ಸಾಮಾಜಿಕ ವಿಚಾರಗಳು ಹಾಗೂ ಜನಪರ ಸಮಸ್ಯೆಗಳಿಗೆ ಆದ್ಯತೆ ನೀಡುವ ಮೂಲಕ ‘ತುಳುನಾಡು ವಾರ್ತೆ ಟಿವಿ ಚಾನೆಲ್’ ತುಳುನಾಡಿನ ಧ್ವನಿಯಾಗಿ ಕಾರ್ಯನಿರ್ವಹಿಸಲಿ ಎಂದು ಗಣ್ಯರು ಆಶಿಸಿದರು.

ಕಾರ್ಯಕ್ರಮದಲ್ಲಿ ತುಳುನಾಡು ವಾರ್ತೆ ಸಂಪಾದಕ ಪುನೀತ್ ಮುಂಡ್ಕೂರು, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಬಾಲಾಜಿ, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ವೈದ್ಯ ಡಾ. ವಿಜಯೇಂದ್ರ, ಉದ್ಯಮಿ ಚೇತನ್ ಶೆಟ್ಟಿ, ವರ್ತಕರ ಸಂಘದ ಪ್ರಕಾಶ್ ಸಜ್ಜನ್, ಉದ್ಯಮಿ ವಿಲ್ಸನ್ ಫರ್ನಾಂಡಿಸ್, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮೀ ಸುಬ್ರಹ್ಮಣ್ಯನಗರ ಹಾಗೂ ಗೌರವ ಸಲಹೆಗಾರ ಸುಧಾಕರ ಅಮೀನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ನೇರಿ ಕರ್ನೇಲಿಯೋ, ರವಿ ಕಟಪಾಡಿ, ಈಶ್ವರ್ ಮಲ್ಪೆ, ಜೇಸನ್ ಡಯಾಸ್, ಪ್ರಮೋದ್ ಕುಮಾರ್ ಶೆಟ್ಟಿ, ಶಿಲ್ಪಿ ದಿನೇಶ್ ಆಚಾರ್ಯ, ಶಶಾಂಕ್ ಸಾಲ್ಯಾನ್, ಯಕ್ಷಗುರು ಗಣೇಶ್ ಕುಮಾರ್ ಚೇರ್ಕಾಡಿ, ರಫೀಕ್ ಕಲ್ಯಾಣಪುರ, ಸ್ವಪ್ನಾ ಸುರೇಶ್ ಹಾಗೂ ಸಾಯಿ ಸೋಷಿಯಲ್ ಸರ್ವಿಸ್ ಅವರನ್ನು ಗೌರವಿಸಲಾಯಿತು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಬಾಲಾಜಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಸಾದ್ರಾಜ್ ಕಾಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ತುಳುನಾಡು ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಮನಸೂರೆಗೊಂಡ ‘ಆಟಿದ ಜನಪದ ಐಸಿರಿ’
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶರತ್ ರಾಜ್ ಆರೂರು ಅವರ ನಿರ್ದೇಶನದಲ್ಲಿ ಮೂಡಿಬಂದ ‘ಆಟಿದ ಜನಪದ ಐಸಿರಿ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆಗಳು, ತುಳುನಾಡಿನ ಜನಪದ ಕಲೆ, ಸಂಸ್ಕೃತಿ ಮತ್ತು ವೈವಿಧ್ಯಮಯ ಜೀವನ ಪದ್ಧತಿಗಳನ್ನು ಕಲಾತ್ಮಕವಾಗಿ ಬಿಂಬಿಸಿದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಮಾಜಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ, ವಕೀಲ ಶಾಂತಾರಾಮ ಶೆಟ್ಟಿ, ಉದ್ಯಮಿ ಚೇತನ್ ಶೆಟ್ಟಿ, ಎಸ್.ಬಿ. ಟ್ರೇಡರ್ಸ್ನ ಸುಶಾಂತ್ ಬ್ರಹ್ಮಾವರ, ವರ್ತಕರ ಸಂಘದ ಕೋಶಾಧಿಕಾರಿ ಪ್ರಕಾಶ್ ಸಜ್ಜನ್, ತುಳುನಾಡು ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಗೌರವ ಸಲಹೆಗಾರ ಸುಧಾಕರ ಅಮೀನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮೀ ಸುಬ್ರಹ್ಮಣ್ಯನಗರ, ವೈದ್ಯರ ಘಟಕದ ಅಧ್ಯಕ್ಷ ಡಾ. ಸಂದೀಪ್ ಸನಿಲ್, ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮೀನಗರ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಷನ್ ಡಿಸೋಜ ಅಮ್ಮುಂಜೆ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರೂರು, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ಸತೀಶ್ ಖಾರ್ವಿ, ಕಾರ್ಕಳ ತಾಲೂಕು ಅಧ್ಯಕ್ಷ ರಮಾಕಾಂತ್ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಉಪಾಧ್ಯಕ್ಷ ಮನೋಜ್ ಕೆ.ಜೆ. ರೋಡ್, ಜಿಲ್ಲಾ ಉಪಾಧ್ಯಕ್ಷೆ ಗಾಯತ್ರಿ ಹಾಗೂ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪವಿತ್ರಾ ಆಚಾರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಲಾವಣ್ಯ ಪ್ರಾರ್ಥಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತಿಸಿದರು. ಕಾರ್ಮಿಕ ಘಟಕದ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ವಂದಿಸಿದರು. ಯೋಗಿಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ನೆಲ, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯ ಸಂಕಲ್ಪದೊಂದಿಗೆ ನಡೆದ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಸಾಂಸ್ಕೃತಿಕ ವೈಭವದ ಅನಾವರಣದ ಜೊತೆಗೆ, ಮುಂದಿನ ಪೀಳಿಗೆಗೆ ತುಳುನಾಡಿನ ಪರಂಪರೆಯನ್ನು ಕೊಂಡೊಯ್ಯುವ ಮಹತ್ವದ ಸಂದೇಶವನ್ನು ಸಾರಿತು.

