ಉಡುಪಿ, ಆ.12: ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಟಿ ಅಮಾವಾಸ್ಯೆಯ ಪ್ರಯುಕ್ತ ಸಾಂಪ್ರದಾಯಿಕ ಪಾಲೆ ಕತ್ತೆ ಕಷಾಯ ವಿತರಣಾ ಕಾರ್ಯಕ್ರಮವು ಬುಧವಾರ ಮುಂಜಾನೆ ಉಡುಪಿ ಕ್ಲಾಕ್ ಟವರ್ ಸಮೀಪ ನಡೆಯಿತು.
ಬೆಳಗ್ಗೆ 4.30ಕ್ಕೆ ನಡೆದ ಕಾರ್ಯಕ್ರಮಕ್ಕೆ ಪೆರ್ನಾಂಡಿಸ್ ಗ್ರೂಪ್ನ ಚೇರ್ಮನ್ ವಿಲ್ಸನ್ ಫರ್ನಾಂಡಿಸ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತುಳುನಾಡ ರಕ್ಷಣಾ ವೇದಿಕೆ ಕಳೆದ 17 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಈ ಸಂಪ್ರದಾಯವು ತುಳುನಾಡಿನ ಪಾರಂಪರಿಕ ಆಚರಣೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, “ಪ್ರತಿವರ್ಷದಂತೆ ಈ ವರ್ಷವೂ ಆಟಿ ಅಮಾವಾಸ್ಯೆಯಂದು ಉಡುಪಿಯ ಹೃದಯ ಭಾಗದಲ್ಲಿ ಸಾರ್ವಜನಿಕರಿಗೆ ಪಾಲೆ ಕತ್ತೆ ಕಷಾಯವನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರಿಂದ ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತಸ ತಂದಿದೆ” ಎಂದರು.
ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯ ಸಂರಕ್ಷಣೆಗೆ ತುಳುನಾಡ ರಕ್ಷಣಾ ವೇದಿಕೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಮಾತನಾಡಿ, ಆಟಿ ಅಮಾವಾಸ್ಯೆ ಹಾಗೂ ಪಾಲೆ ಕತ್ತೆ ಕಷಾಯದ ಸಾಂಪ್ರದಾಯಿಕ ಮಹತ್ವವನ್ನು ವಿವರಿಸಿದರು. ತುಳುನಾಡಿನ ಜನಜೀವನದಲ್ಲಿ ಆಟಿ ತಿಂಗಳಿಗೆ ವಿಶೇಷ ಸ್ಥಾನವಿದ್ದು, ಹಿರಿಯರಿಂದ ನಡೆದು ಬಂದಿರುವ ಆಚರಣೆಗಳನ್ನು ಅರ್ಥಪೂರ್ಣವಾಗಿ ಮುಂದುವರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ವೈದ್ಯರ ಘಟಕದ ಅಧ್ಯಕ್ಷ ಡಾ. ಸಂದೀಪ್ ಸನಿಲ್, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರುೂರು, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಕಾಪು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್, ಉಡುಪಿ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕೃಷ್ಣ ಮಾರ್ಪಳ್ಳಿ, ಪ್ರೀತಮ್ ಡಿಕೋಸ್ಟ (ಜಿಲ್ಲಾ ಜೊತೆ ಕಾರ್ಯದರ್ಶಿ), ಜಿಲ್ಲಾ ಉಪಾಧ್ಯಕ್ಷ ಮನೋಜ್ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್, ಮುಖಂಡರಾದ ಗೋಪಾಲ್ ನಾಯ್ಕ್, ರವಿ, ಅಜಯ್ ಕುಲಾಲ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಆಟಿ ಅಮಾವಾಸ್ಯೆಯ ಪ್ರಯುಕ್ತ ನಡೆದ ಪಾಲೆ ಕತ್ತೆ ಕಷಾಯ ವಿತರಣಾ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಸಾಂಪ್ರದಾಯಿಕ ಪಾಲೆ ಕತ್ತೆ ಕಷಾಯವನ್ನು ಸೇವಿಸಿದರು. ಈ ಮೂಲಕ ತುಳುನಾಡಿನ ಪಾರಂಪರಿಕ ಆಚರಣೆಯನ್ನು ಜನಸಾಮಾನ್ಯರೊಂದಿಗೆ ಹಂಚಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ತುಳುನಾಡ ರಕ್ಷಣಾ ವೇದಿಕೆ ಮುಂದುವರಿಸಿತು.

