ಮಂಗಳೂರು, ಆ. 12: ಯಾವುದೇ ಭಾಷೆ, ಸಂಪ್ರದಾಯ, ಆಚರಣೆ ಹಾಗೂ ವಿಚಾರಗಳನ್ನು ಕೇವಲ ಮಾತನಾಡುವುದರಿಂದ ಅವು ಉಳಿಯುವುದಿಲ್ಲ. ಅವುಗಳನ್ನು ನಿತ್ಯದ ಬದುಕಿನಲ್ಲಿ ಬಳಸಿಕೊಂಡು ಆಚರಿಸಿದಾಗ ಮಾತ್ರ ಮುಂದಿನ ಪೀಳಿಗೆ ಹಾಗೂ ಜನಾಂಗಕ್ಕೆ ವರ್ಗಾವಣೆಯಾಗಿ ಉಳಿದು ಬೆಳೆಯಲು ಸಾಧ್ಯ. ಇಲ್ಲವಾದರೆ ಒಂದು ತಲೆಮಾರಿನೊಂದಿಗೆ ಅವು ನಶಿಸಿಹೋಗುವ ಸಾಧ್ಯತೆ ಇದೆ ಎಂದು ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅಭಿಪ್ರಾಯಪಟ್ಟರು.
ಕದ್ರಿಯ ಡಿಂಕಿ ಡೈನ್ ಆವರಣದಲ್ಲಿ ಡಿಂಕಿ ಡೈನ್ನ ಸ್ವರ್ಣ ಸುಂದರ್, ತುಳುವ ಬೊಳ್ಳಿ ಪ್ರತಿಷ್ಠಾನದ ದಯಾನಂದ ಕತ್ತಲ್ಸಾರ್ ಹಾಗೂ ಸಮಾನ ಮನಸ್ಕ ಮಿತ್ರರ ಸಹಕಾರದಲ್ಲಿ ಆಯೋಜಿಸಿದ್ದ ಆಟಿ ಅಮಾವಾಸ್ಯೆ ಪ್ರಯುಕ್ತ ‘ಆಟಿ ಕಷಾಯ ಮತ್ತು ಗಂಜಿ’ ಸಾಮೂಹಿಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ, ಪ್ರಕೃತಿ, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವರ್ಣ ಸುಂದರ್ ಹಾಗೂ ದಯಾನಂದ ಕತ್ತಲ್ಸಾರ್ ಸೇರಿದಂತೆ ಸಮಾನ ಮನಸ್ಕರು ಕಳೆದ 12 ವರ್ಷಗಳಿಂದ ಆಟಿ ಅಮಾವಾಸ್ಯೆಯ ಸಂದರ್ಭದಲ್ಲಿ ಹಿರಿಯರ ಸಂಪ್ರದಾಯದಂತೆ ಆಟಿ ಕಷಾಯ ಮತ್ತು ಗಂಜಿಯನ್ನು ಸಾಮೂಹಿಕವಾಗಿ ಹಂಚುವ ಮೂಲಕ ತುಳುನಾಡಿನ ಪಾರಂಪರಿಕ ಆಚರಣೆಯನ್ನು ಜೀವಂತವಾಗಿರಿಸುತ್ತಿರುವುದು ಶ್ಲಾಘನೀಯ ಎಂದರು.
ಆಟಿ ಅಮಾವಾಸ್ಯೆಯಂದು ಕಷಾಯ ಮತ್ತು ಗಂಜಿ ಪಡೆಯಲು ನೂರಾರು ಮಂದಿ ಭಾಗವಹಿಸಿ, ದೊಡ್ಡ ದೊಡ್ಡ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯವೇ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಗೆ ಜನರು ನೀಡುತ್ತಿರುವ ಗೌರವ ಮತ್ತು ಬೆಲೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಇಂತಹ ಆಚರಣೆಗಳು ಕೇವಲ ಒಂದು ದಿನದ ಕಾರ್ಯಕ್ರಮಗಳಾಗಿ ಸೀಮಿತವಾಗದೆ, ಅದರ ಹಿಂದಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ಹಿರಿಯರಿಂದ ಬಂದಿರುವ ಜ್ಞಾನ, ಆಹಾರ ಪದ್ಧತಿ, ಆಚರಣೆ ಹಾಗೂ ಜೀವನಶೈಲಿಯನ್ನು ಯುವಜನತೆ ಅಳವಡಿಸಿಕೊಂಡಾಗ ಮಾತ್ರ ತುಳುನಾಡಿನ ವಿಶಿಷ್ಟ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದು ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
“ತುಳುವೇ ನಿತ್ಯ, ಕನ್ನಡವೇ ಸತ್ಯ”
“ಮಾತಾಡು ಮಂಗಳೂರು, ಮಾತಾಡು”
ಎಂಬ ಸಂದೇಶದೊಂದಿಗೆ ಅವರು ತುಳು ಭಾಷೆ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.

