ಹೆಬ್ರಿ, ಆ.11: ಹೆಬ್ರಿ ಭಾಗದಲ್ಲಿ ಸಾರ್ವಜನಿಕರು, ವಾಹನ ಸವಾರರು ಹಾಗೂ ಮನೆಗಳಿಗೆ ಅಪಾಯಕಾರಿಯಾಗಿರುವ ಒಣ ಹಾಗೂ ಹಸಿ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ, ಇತ್ತೀಚೆಗೆ ಮರ ಬಿದ್ದು ಮೃತಪಟ್ಟ ಸದಾನಂದ ಪ್ರಭು ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಅರಣ್ಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಹೆಬ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿರುವ ಹಲವು ಮರಗಳು ಯಾವುದೇ ಸಂದರ್ಭದಲ್ಲಿ ಗಾಳಿ-ಮಳೆಗೆ ಉರುಳಿ ಬೀಳುವ ಆತಂಕವಿದೆ. ಇತ್ತೀಚೆಗೆ ಸಂಭವಿಸಿದ ಮರ ಬಿದ್ದು ಸದಾನಂದ ಪ್ರಭು ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಇಂತಹ ಅಪಾಯಕಾರಿ ಮರಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜೆಸಿಬಿ ಕಾಮಗಾರಿಯಿಂದ ಮರಗಳ ಬೇರು ಸಡಿಲ
ರಸ್ತೆ ಬದಿಯಲ್ಲಿ ನೀರಿನ ಪೈಪ್, ಕೇಬಲ್ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ನಿರಂತರವಾಗಿ ಜೆಸಿಬಿ ಮೂಲಕ ಆಳವಾಗಿ ಹೊಂಡ ತೆಗೆಯುತ್ತಿರುವುದರಿಂದ ಹಲವು ಮರಗಳ ಬುಡದ ಬೇರುಗಳು ಸಡಿಲಗೊಂಡಿವೆ. ಇದರಿಂದ ಗಾಳಿ-ಮಳೆಯ ಸಂದರ್ಭದಲ್ಲಿ ಹಸಿ ಮರಗಳೂ ಸಹ ಬುಡಸಮೇತ ಉರುಳಿ ಬೀಳುವ ಅಪಾಯ ಎದುರಾಗಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ಒಣಮರಗಳಷ್ಟೇ ಅಲ್ಲದೆ, ಬೇರುಗಳು ದುರ್ಬಲಗೊಂಡಿರುವ ಹಸಿ ಮರಗಳನ್ನೂ ಅಧಿಕಾರಿಗಳು ಸಮೀಕ್ಷೆ ನಡೆಸಿ ಅಪಾಯಕಾರಿ ಮರಗಳ ಪಟ್ಟಿಗೆ ಸೇರಿಸಬೇಕು. ರಸ್ತೆ, ಮನೆ, ಶಾಲೆ, ಸಾರ್ವಜನಿಕ ಸ್ಥಳ ಹಾಗೂ ವಾಹನ ಸಂಚಾರಕ್ಕೆ ಅಪಾಯ ಉಂಟುಮಾಡುವ ಮರಗಳನ್ನು ತಕ್ಷಣ ತೆರವುಗೊಳಿಸುವ ಮೂಲಕ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಮರಗಳು ಅಪಾಯಕಾರಿ ಸ್ಥಿತಿಯಲ್ಲಿರುವುದು ಗೊತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಅಮೂಲ್ಯ ಜೀವಗಳು ಬಲಿಯಾಗುವ ಸಾಧ್ಯತೆಯಿದೆ. ಯಾವುದೇ ದುರಂತ ಸಂಭವಿಸಿದ ಬಳಿಕ ಪರಿಹಾರ ನೀಡುವುದಕ್ಕಿಂತ, ದುರಂತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಇಲಾಖೆಗಳ ಜವಾಬ್ದಾರಿಯಾಗಿದೆ ಎಂದು ಶ್ರೀಕಾಂತ್ ಪೂಜಾರಿ ಕುಚ್ಚೂರು ಹೇಳಿದ್ದಾರೆ.
“ಇರೋದೊಂದು ಜೀವನ; ಹಿಂದೇನಾಯ್ತು ನೆನಪಿಲ್ಲ, ಮುಂದೇನಾಗುತ್ತೋ ಗೊತ್ತಿಲ್ಲ. ಬದುಕಿರುವವರಿಗಾಗಿ ಹೋರಾಟ ಮಾಡಬೇಕಾಗಿದೆ. ಕಣ್ಣು ಮುಚ್ಚಿ ಕುಳಿತುಕೊಂಡರೆ ಮನೆಯ ದೀಪವೇ ಹಾರಿ ಹೋದಂತಾಗುತ್ತದೆ.” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸದಾನಂದ ಪ್ರಭು ಅವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರಧನವನ್ನು ಶೀಘ್ರ ಬಿಡುಗಡೆ ಮಾಡಬೇಕು ಹಾಗೂ ಹೆಬ್ರಿ ಭಾಗದಲ್ಲಿ ಅಪಾಯಕಾರಿ ಮರಗಳ ಸಮಗ್ರ ಸಮೀಕ್ಷೆ ನಡೆಸಿ, ಅಗತ್ಯವಿರುವ ಮರಗಳನ್ನು ತೆರವುಗೊಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

