ವಿಟ್ಲ, ಆ. 11: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ಮಂಗಳವಾರ ನಡೆದಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕುಂಟುಕುಡೇಲು ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಗೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಘಟನೆ ನಡೆದ ಸಂದರ್ಭದಲ್ಲಿ ಬಸ್ನಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ವಿದ್ಯುತ್ ಕಂಬವೂ ಹಾನಿಗೊಳಗಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದು ಭಾರೀ ಅನಾಹುತದ ಸಾಧ್ಯತೆಯನ್ನು ಹುಟ್ಟುಹಾಕಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ತಾಂತ್ರಿಕ ಪರಿಶೀಲನೆಗೆ ಒತ್ತು ಅಗತ್ಯ
ಬಸ್ ಶಾಲೆಯಿಂದ ಹೊರಡುವ ಮುನ್ನ ಅದರ ತಾಂತ್ರಿಕ ಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಲಾಗಿತ್ತೇ ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ವಿದ್ಯಾರ್ಥಿಗಳನ್ನು ಸಾಗಿಸುವ ಶಾಲಾ ವಾಹನಗಳ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಪ್ರತಿದಿನ ಶಾಲಾ ವಾಹನಗಳು ಸಂಚಾರಕ್ಕೆ ಹೊರಡುವ ಮೊದಲು ಬ್ರೇಕ್, ಸ್ಟೀರಿಂಗ್, ಟೈರ್, ವಿದ್ಯುತ್ ವ್ಯವಸ್ಥೆ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.
ಇತ್ತೀಚೆಗೆ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ವಿದ್ಯಾರ್ಥಿ ವಾಹನಗಳ ಸುರಕ್ಷತೆ ಕುರಿತು ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಶಾಲಾ ಬಸ್ ಹಾಗೂ ಇತರ ವಿದ್ಯಾರ್ಥಿ ವಾಹನಗಳ ತಾಂತ್ರಿಕ ಸ್ಥಿತಿ, ಫಿಟ್ನೆಸ್, ಅತಿಯಾದ ವಿದ್ಯಾರ್ಥಿಗಳ ಸಾಗಣೆ ಹಾಗೂ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಗಮನ ಸೆಳೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ನಡೆದಿರುವ ಘಟನೆ ವಿದ್ಯಾರ್ಥಿ ವಾಹನಗಳ ಸುರಕ್ಷತಾ ಪರಿಶೀಲನೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಮಕ್ಕಳನ್ನು ಸಾಗಿಸುವ ಎಲ್ಲಾ ವಾಹನಗಳ ತಾಂತ್ರಿಕ ಸ್ಥಿತಿ ಹಾಗೂ ಫಿಟ್ನೆಸ್ನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ಬಸ್ನ ತಾಂತ್ರಿಕ ದೋಷದ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

