ಉಡುಪಿ, ಆ. 10: ಉಡುಪಿಯಲ್ಲಿ ಸಹಕಾರಿ ಸೊಸೈಟಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಘಟನೆಯಿಂದ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಪರಿಚಿತರಲ್ಲಿ ಆಘಾತ ಉಂಟಾಗಿದೆ.
ಕಲ್ಪನಾ ಟಾಕೀಸ್ ಸಮೀಪದ ಸಾಯಿರಾಜ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಸಚಿನ್ ಶೆಟ್ಟಿ (44) ಅವರು ಅಂಬಲಪಾಡಿ ಸಮೀಪ ತಾವು ವಾಸವಿದ್ದ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಚಿನ್ ಶೆಟ್ಟಿ ಅವರು ಕಳೆದ ನಾಲ್ಕು ವರ್ಷಗಳಿಂದ ಸಾಯಿರಾಜ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಬೆಳಗ್ಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ವೈಯಕ್ತಿಕ, ವೃತ್ತಿ ಸಂಬಂಧಿತ ಅಥವಾ ಇತರ ಯಾವುದೇ ಕಾರಣಗಳ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉಡುಪಿಯ ಸಹಕಾರಿ ವಿಭಾಗದಲ್ಲಿ ಸಚಿನ್ ಶೆಟ್ಟಿ ಅವರ ಆತ್ಮಹತ್ಯೆ ದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ. ಸಚಿನ್ ಶೆಟ್ಟಿ ಅವರ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಅಭಿಪ್ರಾಯವಿದೆ. ಯಾವುದೇ ಅವ್ಯವಹಾರ ಮಾಡುವಂತಹ ವ್ಯಕ್ತಿತ್ವದವರು ಅಲ್ಲ ಎಂಬ ಅಭಿಪ್ರಾಯವೂ ಉಡುಪಿಯಲ್ಲಿ ಕೇಳಿ ಬರುತ್ತಿದೆ.ಪೊಲೀಸರ ತನಿಖೆ ಹಾಗೂ ಸ್ಥಳ ಪರಿಶೀಲನೆಯ ಬಳಿಕವಷ್ಟೇ ಘಟನೆಯ ಹಿಂದಿನ ನಿಖರ ಕಾರಣ ತಿಳಿದುಬರುವ ಸಾಧ್ಯತೆಯಿದೆ.ಸಚಿನ್ ಶೆಟ್ಟಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಕುಟುಂಬಸ್ಥರು, ಸೊಸೈಟಿ ಸಿಬ್ಬಂದಿ ಹಾಗೂ ಸ್ನೇಹಿತರು, ಪರಿಚಿತರಲ್ಲಿ ತೀವ್ರ ದುಃಖ ಆವರಿಸಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಮೌನವಾಗಿರಬೇಡಿ
ಆತ್ಮಹತ್ಯೆಯ ಯೋಚನೆಗಳು ಕಾಡಿದಾಗ ಒಬ್ಬರೇ ಅದನ್ನು ಎದುರಿಸಬೇಕಿಲ್ಲ. ತಕ್ಷಣವೇ ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಮಾತನಾಡಿ, ಅಗತ್ಯವಿದ್ದರೆ ಆರೋಗ್ಯ ಇಲಾಖೆಯ 104 ಹೆಲ್ಪ್ಲೈನ್ ಸಂಪರ್ಕಿಸಿ ನೆರವು ಪಡೆಯಬಹುದು.
ಇದರ ಜೊತೆಗೆ ಕೇಂದ್ರ ಸರ್ಕಾರದ Tele-MANAS 14416 ಸಹಾಯವಾಣಿಯನ್ನೂ ಸಂಪರ್ಕಿಸಬಹುದು. ಮಾನಸಿಕ ಒತ್ತಡ, ಆತಂಕ ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವವರಿಗೆ ತಜ್ಞರ ನೆರವು ಪಡೆಯಲು ಈ ಸೇವೆಗಳು ಸಹಕಾರಿಯಾಗುತ್ತವೆ.
ನೆನಪಿಡಿ — ಸಂಕಷ್ಟದ ಕ್ಷಣ ಶಾಶ್ವತವಲ್ಲ. ಸಹಾಯ ಕೇಳುವುದು ದೌರ್ಬಲ್ಯವಲ್ಲ; ಅದು ಬದುಕಿನತ್ತ ಇಡುವ ಮಹತ್ವದ ಹೆಜ್ಜೆ.

