ಉಡುಪಿ, ಆ. 10: ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ಉಡುಪಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಸೋಮವಾರ ಆದೇಶಿಸಿದೆ.
ಉತ್ತರಾಖಂಡ ಮೂಲದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರ ಮೂಲದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಅವರನ್ನು ಪ್ರಕರಣದ ತನಿಖಾಧಿಕಾರಿ ಹಾಗೂ ಕಾಪು ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ ಅವರ ನೇತೃತ್ವದ ಪೊಲೀಸ್ ತಂಡ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಪ್ರಕರಣದ ಹೆಚ್ಚಿನ ತನಿಖೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಪುರುಷೋತ್ತಮ ಅವರು ಇಬ್ಬರು ಆರೋಪಿಗಳನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದರು.
ಪೊಲೀಸ್ ಕಸ್ಟಡಿಗೆ ಪಡೆದಿರುವ ಆರೋಪಿಗಳಿಂದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ವಿಶೇಷವಾಗಿ ಹತ್ಯೆಯ ಹಿಂದಿರುವ ನಿಖರ ಕಾರಣ, ಸಂಚಿನ ಸ್ವರೂಪ, ಹತ್ಯೆಗೆ ಸಹಕರಿಸಿದವರು ಹಾಗೂ ಇತರ ಆರೋಪಿಗಳ ಪಾತ್ರ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ.
ಆರೋಪಿಗಳ ವಿಚಾರಣೆ ಹಾಗೂ ತನಿಖೆಯ ಮುಂದಿನ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಹತ್ವದ ಮಾಹಿತಿಗಳು ಹೊರಬರುವ ನಿರೀಕ್ಷೆಯಿದೆ. ಪ್ರಕರಣದ ತನಿಖೆಯನ್ನು ಕಾಪು ಪೊಲೀಸರು ಮುಂದುವರಿಸಿದ್ದಾರೆ.

