ಮಂಗಳೂರು, ಆ. 9: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯು ಮಲ್ಲಿಕಟ್ಟೆಯ ಸುಮಾ ಸದನದಲ್ಲಿ ಕ್ಷೇತ್ರಾಧ್ಯಕ್ಷ ಎನ್.ಪಿ. ಪುಷ್ಪರಾಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ವಾರ್ಡ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಪಕ್ಷದ ತಳಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸುವುದು ಹಾಗೂ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಶಾರದ ಶೆಟ್ಟಿ ಅವರು ಪ್ರಾರ್ಥನೆ ನೆರವೇರಿಸಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಮಿತ್ ಸುವರ್ಣ ಬೋಳಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟುವ ಅಗತ್ಯತೆ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ವಾರ್ಡ್ ಮಟ್ಟದಲ್ಲಿ ಜೆಡಿಎಸ್ ಸಂಘಟನೆ ಬಲಪಡಿಸಲು ಕರೆ

ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, ವಾರ್ಡ್ ಸಮಿತಿಗಳನ್ನು ಬಲಿಷ್ಠವಾಗಿ ರಚಿಸುವ ಮೂಲಕ ಪಕ್ಷದ ತಳಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷದ ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಪಕ್ಷದ ಸಂಘಟನೆಯನ್ನು ಕೇವಲ ಚುನಾವಣಾ ಸಮಯಕ್ಕೆ ಸೀಮಿತಗೊಳಿಸದೆ, ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಮೇಲಿನ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಜೆಡಿಎಸ್ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ ಅವರು ಮಾತನಾಡಿ, ಪಕ್ಷವನ್ನು ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಪ್ರತಿಯೊಬ್ಬರಿಗೂ ಮುಕ್ತ ಮನಸ್ಸಿನಿಂದ ಸಹಕಾರ ನೀಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಮುಲ್ಕಿ ಶಶಿಪ್ರಭಾ ಶೆಟ್ಟಿಗೆ ಶ್ರದ್ಧಾಂಜಲಿ
ಸಭೆಯಲ್ಲಿ ಮುಲ್ಕಿ ಶಶಿಪ್ರಭಾ ಶೆಟ್ಟಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಸೇವೆಯನ್ನು ಸ್ಮರಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ರತ್ನಾಕರ್ ಸುವರ್ಣರ ಕುರಿತು ಸುಳ್ಳು ಸುದ್ದಿ ಖಂಡನೆ
ಇದೇ ವೇಳೆ, ಜೆಡಿಎಸ್ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮರಣ ಸುದ್ದಿ ಹರಡಿರುವುದನ್ನು ಸಭೆ ತೀವ್ರವಾಗಿ ಖಂಡಿಸಿತು.
ಸುಳ್ಳು ಹಾಗೂ ಆಧಾರರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕ್ರಮವನ್ನು ಸಭೆ ಶ್ಲಾಘಿಸಿತು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಒಗ್ಗಟ್ಟಿನಿಂದ ಪಕ್ಷ ಕಟ್ಟಲು ಕರೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಎನ್.ಪಿ. ಪುಷ್ಪರಾಜನ್ ಅವರು ಮಾತನಾಡಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ವಾರ್ಡ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ವಿಸ್ತರಿಸಿ, ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷೆ ಸುಮತಿ ಹೆಗ್ಡೆ, ಕಾನೂನು ವಿಭಾಗದ ಅಧ್ಯಕ್ಷೆ ಭಾರತಿ ಪುಷ್ಪರಾಜನ್, ಪಕ್ಷದ ಮುಖಂಡರಾದ ಜಾವೀದ್ ಸಲೀಂ, ಲತೀಫ್ ಬೆಂಗ್ರೆ, ಪ್ರಶಾಂತ್ ಭಟ್ ಕಡಬ, ಕವಿತಾ, ಲತೀಫ್ ಶಿವಬಾಗ್ ಸೇರಿದಂತೆ ಕ್ಷೇತ್ರದ ವಿವಿಧ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ಫೆರ್ನಾಂಡಿಸ್ ಅವರು ಧನ್ಯವಾದ ಸಮರ್ಪಿಸಿದರು.

ಸಭೆಯ ಕೊನೆಯಲ್ಲಿ ಡಾ. ಸುಖಲತಾ ಶೆಟ್ಟಿ ಅವರು ರಾಷ್ಟ್ರಗೀತೆ ಹಾಡಿದರು.

