ಉಡುಪಿ, ಆ. 9: ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಯುಪಿಸಿಎಲ್ ಗುತ್ತಿಗೆ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ವೈಮನಸ್ಸೇ ಕೊಲೆಗೆ ಪ್ರಮುಖ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿಗಳ ಬಂಧನದ ಬಳಿಕ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ತನಿಖೆಯ ವಿವರಗಳನ್ನು ಬಹಿರಂಗಪಡಿಸಿದ ಎಸ್ಪಿ, ಪ್ರಕರಣದ ಎ1 ಆರೋಪಿ ರಾಜು ಎಂಬಾತನ ಬ್ಯಾಂಕ್ ಖಾತೆಗೆ ₹2 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು. ಕೊಲೆಗೂ ಮುನ್ನ ಹಾಗೂ ಕೊಲೆಯ ಬಳಿಕ ಹಂತ ಹಂತವಾಗಿ ಹಣ ಪಾವತಿಯಾಗಿರುವುದು ಗಮನಕ್ಕೆ ಬಂದಿದ್ದು, ಹಣದ ಮೂಲ ಹಾಗೂ ಅದನ್ನು ಪಾವತಿಸಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದರು.
₹2–3 ಕೋಟಿ ಗುತ್ತಿಗೆ ವಿಚಾರದಲ್ಲಿ ವೈಮನಸ್ಸು
ಡೇವಿಡ್ ಡಿಸೋಜಾ ಅವರು ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಸುಮಾರು ₹2ರಿಂದ ₹3 ಕೋಟಿ ಮೊತ್ತದ ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಗುತ್ತಿಗೆದಾರನೊಂದಿಗೆ ವೈಮನಸ್ಸು ಉಂಟಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ವ್ಯಕ್ತಿಯೊಬ್ಬರು ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಸುಪಾರಿ ನೀಡಿ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುಪಾರಿ ನೀಡಿದ ವ್ಯಕ್ತಿಗಳು ಹಾಗೂ ಹಣದ ವಹಿವಾಟಿನ ಮೂಲ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ಹೊರರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
9 ಎಂಎಂ ಪಿಸ್ತೂಲಿನಿಂದ ಗುಂಡಿನ ದಾಳಿ
ಎ1 ಆರೋಪಿ ರಾಜು 9 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಿ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಆರೋಪಿಗಳಿಂದ 9 ಎಂಎಂ ಪಿಸ್ತೂಲ್, ಮೂರು ಮೊಬೈಲ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಸುಮಾರು ಎರಡು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಕೃತ್ಯಕ್ಕೆ ಸ್ಥಳೀಯವಾಗಿ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳು ಎರ್ಮಾಳ್ ಬಳಿ ಬೈಕ್ವೊಂದನ್ನು ಬಿಟ್ಟು ಪರಾರಿಯಾಗಿದ್ದು, ಆ ಬೈಕ್ನ್ನು ಯಾರು ಒದಗಿಸಿದ್ದರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
500ಕ್ಕೂ ಹೆಚ್ಚು ಪೊಲೀಸರಿಂದ ಕಾರ್ಯಾಚರಣೆ
ಆರೋಪಿಗಳು ಉಡುಪಿ ಜಿಲ್ಲೆಯಿಂದ ಪರಾರಿಯಾಗದಂತೆ ಜಿಲ್ಲೆಯ ವಿವಿಧ ಗಡಿಭಾಗಗಳಲ್ಲಿ ನಾಕಾಬಂದಿ ನಡೆಸಲಾಗಿತ್ತು. ಉಡುಪಿ ಮತ್ತು ಭಟ್ಕಳ ರೈಲು ನಿಲ್ದಾಣಗಳಲ್ಲಿಯೂ ತೀವ್ರ ತಪಾಸಣೆ ನಡೆಸಲಾಗಿತ್ತು.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, 500ಕ್ಕೂ ಹೆಚ್ಚು ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯನಿರ್ವಹಿಸಿದ್ದರು ಎಂದು ಎಸ್ಪಿ ವಿವರಿಸಿದರು.
ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗೂ ಕುಮಟಾ ಭಾಗಗಳಲ್ಲಿ ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಸಲಾಗಿತ್ತು.
ಪೊಲೀಸರ ಮೇಲೆ ಹಲ್ಲೆ; ಆತ್ಮರಕ್ಷಣೆಗಾಗಿ ಗುಂಡಿನ ದಾಳಿ
ಒತ್ತಿನೆಣೆ ಬಳಿ ಬಸ್ಗಳನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡ ಮೂವರು ಆರೋಪಿಗಳು ಬಸ್ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದರು.
ಈ ವೇಳೆ ಕಾಪು ಠಾಣೆಯ ಪಿಎಸ್ಐ ತೇಜಸ್ವಿ ಅವರು ಎ1 ಆರೋಪಿ ರಾಜುವನ್ನು ಬೆನ್ನಟ್ಟಿದ್ದರು. ರಾಜು ಪಿಎಸ್ಐ ತೇಜಸ್ವಿ ಅವರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪಿಎಸ್ಐ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ರಾಜು ಹಾಗೂ ಹಲ್ಲೆಯಿಂದ ಗಾಯಗೊಂಡ ಪಿಎಸ್ಐ ತೇಜಸ್ವಿ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ನಡುವೆ ಉಳಿದ ಇಬ್ಬರು ಆರೋಪಿಗಳಾದ ಅನಮೋಲ್ ಹಾಗೂ ಜಿಯಾವುಲ್ ವಜುಲ್ ಶೇಖ್ ಅವರನ್ನು ಶನಿವಾರ ಬೆಳಗ್ಗೆ ಭಟ್ಕಳ ಹಾಗೂ ಕುಮಟಾ ಭಾಗಗಳಲ್ಲಿ ಬಂಧಿಸಲಾಗಿದೆ.
ಐದು ರಾಜ್ಯಗಳಲ್ಲಿ ರಾಜು ವಿರುದ್ಧ 26 ಪ್ರಕರಣ
ಎ1 ಆರೋಪಿ ರಾಜು ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ ಒಟ್ಟು 26 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎ2 ಆರೋಪಿ ಅನಮೋಲ್ ವಿರುದ್ಧ 2018ರ ಬಳಿಕ ನಾಲ್ಕು ರಾಜ್ಯಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳಿರುವುದು ತನಿಖೆಯಿಂದ ತಿಳಿದುಬಂದಿದೆ.
ಸುಳ್ಳು ಹೆಸರು ಬಳಸಿ ಪರಿಚಯ
ಆರೋಪಿಗಳು ಪರಸ್ಪರ ಸಂಪೂರ್ಣ ಪರಿಚಿತರಾಗಿರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಅವರು ಪರಸ್ಪರ ಸುಳ್ಳು ಹೆಸರುಗಳನ್ನು ಹೇಳಿಕೊಂಡು ಪರಿಚಯಿಸಿಕೊಂಡಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿಗಳು ಪರಾರಿಯಾಗುವ ಸಂದರ್ಭದಲ್ಲಿ ಅವರ ಬಳಿಯಿದ್ದ ಮೊಬೈಲ್ ಫೋನ್ಗಳು ಪೊಲೀಸರ ಕೈಗೆ ಸಿಗದೇ ಹೋಗುವ ಸಾಧ್ಯತೆಯಿತ್ತು. ಸದ್ಯ ವಶಪಡಿಸಿಕೊಂಡಿರುವ ಮೊಬೈಲ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳ ಆಧಾರದ ಮೇಲೂ ತನಿಖೆ ಮುಂದುವರಿದಿದೆ.
ತನಿಖೆ ಮುಂದುವರಿಕೆ
ಪ್ರಕರಣದ ಹಿಂದೆ ಇರುವ ಸುಪಾರಿ ನೀಡಿದವರು ಯಾರು? ₹2 ಲಕ್ಷಕ್ಕೂ ಅಧಿಕ ಹಣ ಎಲ್ಲಿಂದ ಬಂದಿದೆ? ಹಣ ಪಾವತಿಸಿದವರು ಯಾರು? ಬೈಕ್ನ್ನು ಒದಗಿಸಿದವರು ಯಾರು? ಆರೋಪಿಗಳಿಗೆ ಸ್ಥಳೀಯವಾಗಿ ಯಾರಾದರೂ ನೆರವು ನೀಡಿದ್ದಾರೆಯೇ? ಎಂಬ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಕೊಲೆಯ ಸಂಚಿನ ಹಿಂದೆ ಇರುವ ವ್ಯಕ್ತಿಗಳ ಪತ್ತೆಗೆ ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.




