ಬೈರಂಪಳ್ಳಿ, ಆ. 2: ತುಳುನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಪರಂಪರೆ ಹಾಗೂ ಜನಪರ ಹಕ್ಕುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಧ್ಯೇಯವಾಗಿಸಿಕೊಂಡಿರುವ ತುಳುನಾಡ ರಕ್ಷಣಾ ವೇದಿಕೆ (ರಿ) ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ಆಶ್ರಯದಲ್ಲಿ ಭಾನುವಾರ ಬೈರಂಪಳ್ಳಿ ಸಾಂತ್ಯಾರ್ನ ಅಂಬೇಡ್ಕರ್ ಸಭಾಭವನದಲ್ಲಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಹಾಗೂ ನೂತನ ಸದಸ್ಯತ್ವ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ನವ್ಯ, ದಿವ್ಯ, ಹರ್ಷಿಣಿ ಹಾಗೂ ನಮೃತ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಹಾಗೂ ರಂಜಿತ್ ಕುಲಾಲ್ ಅತಿಥಿಗಳನ್ನು ಸ್ವಾಗತಿಸಿದರು.

ಸಂಘಟನೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತುಳುನಾಡಿನ ಭಾಷೆ, ಸಂಸ್ಕೃತಿ, ನೆಲ-ಜಲ, ಪರಂಪರೆ ಹಾಗೂ ಐತಿಹಾಸಿಕ ಮೌಲ್ಯಗಳ ಸಂರಕ್ಷಣೆ ಪ್ರತಿಯೊಬ್ಬ ತುಳುವರ ಜವಾಬ್ದಾರಿಯಾಗಿದೆ ಎಂದರು. ಸಮಾಜಸೇವೆ, ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ತುಳುನಾಡ ರಕ್ಷಣಾ ವೇದಿಕೆ ಜನಪರ ಹೋರಾಟಗಳನ್ನು ನಡೆಸುತ್ತಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಿ ಸಂಘಟನೆಯನ್ನು ಗ್ರಾಮಮಟ್ಟದಿಂದ ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಕರೆ ನೀಡಿದರು. ಕಾರ್ಯಕರ್ತರ ನಿಷ್ಠೆ, ಶಿಸ್ತು ಹಾಗೂ ಸೇವಾ ಮನೋಭಾವವೇ ಸಂಘಟನೆಯ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ಳರಪಾಡಿ ಅಂಚೆ ಕಚೇರಿಯ ಅಂಚೆಪಾಲಕ ಜಯರಾಮ ಶೆಟ್ಟಿ ಮಾತನಾಡಿ, ತುಳುನಾಡ ರಕ್ಷಣಾ ವೇದಿಕೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಸಮಾಜಮುಖಿ ಕಾರ್ಯಗಳಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ಫ್ರಾಂಕಿ ಡಿಸೋಜ ಕೊಳಲಗಿರಿ ಮಾತನಾಡಿ, ತುಳುನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿನ ಅಗತ್ಯವನ್ನು ವಿವರಿಸಿದರು. ತುಳು ಭಾಷೆಗೆ ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನಮಾನ ದೊರಕಿಸಲು ತುಳುನಾಡ ರಕ್ಷಣಾ ವೇದಿಕೆ ನಿರಂತರ ಹೋರಾಟ ನಡೆಸುತ್ತಿದ್ದು, ಈ ಹೋರಾಟಕ್ಕೆ ಪ್ರತಿಯೊಬ್ಬ ತುಳುವರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಹ್ಮಣ್ಯನಗರ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ತುಳುನಾಡ ರಕ್ಷಣಾ ವೇದಿಕೆಯ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ, ತುಳು ಭಾಷೆ, ಇತಿಹಾಸ, ಪರಂಪರೆ ಹಾಗೂ ತುಳುನಾಡಿನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಳೆದ ಒಂದು ವರ್ಷದ ಸಂಘಟನೆಯ ಸಾಮಾಜಿಕ ಹಾಗೂ ಜನಪರ ಚಟುವಟಿಕೆಗಳ ಅವಲೋಕನ ನಡೆಸಿ, ಮುಂದಿನ ದಿನಗಳ ಕಾರ್ಯಯೋಜನೆ ಕುರಿತು ಅಭಿಪ್ರಾಯ ವಿನಿಮಯವೂ ನಡೆಯಿತು.
ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಶೆಟ್ಟಿ (ಬೈರಂಪಳ್ಳಿ), ಕೃಷ್ಣ ನಾಯಕ್ (ಶಿರೂರು), ನಾಗೇಶ್ (ಬೆಂಟೆಡ್ಕ), ಪವನ್ (ಬೆಂಟೆಡ್ಕ), ನಾರಾಯಣ (ಬಂಡಸಾಲೆ), ಕರುಣಾಕರ್ (ಕೆ.ಸಿ.ರೋಡ್), ಅನಿಲ್ ಕುಲಾಲ್, ಉದಯ ಕುಲಾಲ್, ಸಂದೀಪ್ ಕುಲಾಲ್ (ದೂಪದಕಟ್ಟೆ), ಬಾಲಾಜಿ ಕುಲಾಲ್ (ಮಾನೈ), ರಮೇಶ್ ಆಚಾರಿ ಹಾಗೂ ಆಕಾಶ್ (ಪೆರ್ಡೂರು) ಸೇರಿದಂತೆ ಹಲವರು ತುಳುನಾಡ ರಕ್ಷಣಾ ವೇದಿಕೆಗೆ ಸದಸ್ಯತ್ವ ಪಡೆದು ಅಧಿಕೃತವಾಗಿ ಸೇರ್ಪಡೆಗೊಂಡರು. ನೂತನ ಸದಸ್ಯರಿಗೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಶಾಲು ಹೊದಿಸಿ, ಸಂಘಟನೆಯ ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.


ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ (ರಿ) ಬೈರಂಪಳ್ಳಿ ಗ್ರಾಮ ಸಂಚಾಲಕ ಮುದ್ದು, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾ ಮುಖಂಡ ಮನೋಜ್ (ಕೆ.ಜಿ.ರೋಡ್), ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರೂರು, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾನಬೆಟ್ಟು, ಬ್ರಹ್ಮಾವರ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಂದ್ರ ಆಚಾರ್ಯ ಹೆರಂಜೆ, ಸದಸ್ಯರಾದ ವಿಜಯ್ ಆರೂರು, ರವಿ ಆರೂರು, ರಾಕೇಶ್ ಆರೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ಪೂಜಾರಿ ಮಾರ್ಪಳ್ಳಿ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ, ಜಂಟಿ ಕಾರ್ಯದರ್ಶಿ ಶಶಿಕಲಾ ಶೆಟ್ಟಿ, ಗೌರವ ಸಲಹೆಗಾರ್ತಿ ಗುಲಾಬಿ ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಗಾಯತ್ರಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪವಿತ್ರ, ಜಂಟಿ ಕಾರ್ಯದರ್ಶಿ ವನಿತಾ ಆಚಾರ್ಯ, ಸಾಂಸ್ಕೃತಿಕ ಘಟಕದ ಅಧ್ಯಕ್ಷೆ ಮಂಜುಳಾ, ಮಹಿಳಾ ಮುಖಂಡೆ ಜ್ಯೋತ, ಆರ್ , ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಉಪಾಧ್ಯಕ್ಷ ಗುಣಾಕರ, ಪ್ರಧಾನ ಕಾರ್ಯದರ್ಶಿ ನಿಶಾಂತ್ ಪೂಜಾರಿ, ರಂಜಿತ್ ಕುಲಾಲ್, ಜಂಟಿ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ, ಪ್ರಮುಖರಾದ ಅಜಯ್ ಕುಲಾಲ್, ಸಚಿನ್ ಕುಮಾರ್ ಶೆಟ್ಟಿ, ಸರ್ವತಮ್ ಅಮೀನ್, ಸುಕೇಶ್, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್, ಗುಣಾಕರ, ಇಂದಿರಾ ಕುಲಾಲ್, ಶ್ರೀನಿವಾಸ್ ಕುಲಾಲ್, ಪ್ರಕಾಶ್ ಕುಲಾಲ್, ಸುದರ್ಶನ್ ಶಿರೂರು, ಸತೀಶ್ ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಜಗದೀಶ್ ನಾಯಕ್ ನೇರಳೆಬೆಟ್ಟು ನಿರ್ವಹಿಸಿದರು.
ಕಾರ್ಯಕ್ರಮವು ಸಂಘಟನೆಯ ಐಕ್ಯತೆ, ಸಂಘಟನಾ ವಿಸ್ತರಣೆ ಹಾಗೂ ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಿದ್ದು, ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು

