ಮಂಗಳೂರು, ಆ. 1: ತೀಯಾ ಸಮಾಜದ ಆರಾಧ್ಯ ಕ್ಷೇತ್ರವಾದ ಉಳ್ಳಾಲ ಶ್ರೀ ಚಿರುಂಭ ಭಗವತೀ ಕ್ಷೇತ್ರದ ಆಡಳಿತಕ್ಕೆ ಸಂಬಂಧಿಸಿದ ವಿವಾದ ಇದೀಗ ಹೊಸ ತಿರುವು ಪಡೆದಿದೆ. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗುರಿಕಾರ ಅವರು ಎರಡು ವರ್ಷದ ಅಧಿಕಾರಾವಧಿ ಪೂರ್ಣಗೊಂಡಿದ್ದರೂ ಮಹಾಸಭೆ ಕರೆಯದೇ ಅಧಿಕಾರ ಮುಂದುವರಿಸಿರುವುದಾಗಿ ಆರೋಪಿಸಿ, ಆಡಳಿತ ಸಮಿತಿ ಸದಸ್ಯ ಪವನ್ ರಾಜ್ ಕೊಲ್ಯ ಅವರು ಜಿಲ್ಲಾ ನೋಂದಣಾಧಿಕಾರಿಗೆ ಸಲ್ಲಿಸಿದ್ದ ದೂರಿನ ಬೆನ್ನಲ್ಲೇ, ದೂರು ಹಿಂಪಡೆಯುವಂತೆ ಜೀವ ಬೆದರಿಕೆ ಹಾಕಿರುವ ಆರೋಪದ ಆಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ಅವರು ಪವನ್ ರಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರು ಹಿಂಪಡೆಯುವಂತೆ ಒತ್ತಡ ಹೇರಿರುವುದಾಗಿ ಆರೋಪಿಸಲಾಗಿದೆ.
ಆಡಿಯೋದಲ್ಲಿನ ಸಂಭಾಷಣೆಯಲ್ಲಿ, “ಜಿಲ್ಲಾ ನೋಂದಣಾಧಿಕಾರಿಗೆ ನಾನು ಮಾತನಾಡಿದ್ದೇನೆ. ನೀನು ಮೌನವಾಗಿದ್ದರೆ ಮೇಲಾಧಿಕಾರಿಗಳಿಂದ ಕರೆ ಬರುತ್ತದೆ. ಭಗವತೀ ಕ್ಷೇತ್ರದ ವಿಚಾರದಲ್ಲಿ ಕೈ ಹಾಕಬೇಡ. ಮುಜರಾಯಿ ಇಲಾಖೆಯ ಕಮಿಷನರ್, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ಮಟ್ಟದಲ್ಲಿ ನಾನು ಮಾತಾಡಿಸಬಲ್ಲೆ. ಇಲಾಖೆಗಳನ್ನು ನಾನು ಹ್ಯಾಂಡಲ್ ಮಾಡುತ್ತೇನೆ. ನೀನು ಕೊಟ್ಟಿರುವ ದೂರಿನ ಪತ್ರವನ್ನೇ ಹರಿದು ಬಿಸಾಡಿಸುತ್ತೇನೆ” ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಆಡಿಯೋ ವೈರಲ್ ಆದ ನಂತರ, ತನ್ನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿರುವ ಪವನ್ ರಾಜ್ ಕೊಲ್ಯ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಆಡಳಿತದಲ್ಲಿ ಅಕ್ರಮಗಳ ಆರೋಪ
ತಮ್ಮ ದೂರಿನಲ್ಲಿ ಪವನ್ ರಾಜ್ ಕೊಲ್ಯ ಅವರು ಕ್ಷೇತ್ರದ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಆದಾಯ-ವೆಚ್ಚದ ಲೆಕ್ಕಪತ್ರಗಳನ್ನು ಸಮಿತಿಯ ಮುಂದೆ ಮಂಡಿಸಲಾಗಿಲ್ಲ. ಸಮಿತಿಯ ಸದಸ್ಯರೊಂದಿಗೆ ಚರ್ಚಿಸದೆ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕಾಮಗಾರಿಗಳನ್ನು ತಮ್ಮ ಪರ ಇರುವವರಿಗೆ ನೀಡಲಾಗಿದೆ. ಇದುವರೆಗೆ ಲೆಕ್ಕಪರಿಶೋಧಕರಿಂದ ವೆಚ್ಚದ ವರದಿ ಸಿದ್ಧಪಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅಧ್ಯಕ್ಷರ ನೇಮಕಾತಿ ಕುರಿತು ಪ್ರಶ್ನೆ
ಪವನ್ ರಾಜ್ ಅವರ ಪ್ರಕಾರ, ಸಂಘದ ಮಹಾಸಭೆಯಲ್ಲಿ ಉಮೇಶ್ ಬೆಂಜನಪದವು ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಅವರು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ ಬಳಿಕ ಹೊಸ ಮಹಾಸಭೆ ಕರೆಯದೇ ಚಿದಾನಂದ ಗುರಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿ ಸಂಘದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಂಘದ ಕಾಯ್ದೆ ಉಲ್ಲಂಘನೆ ಆರೋಪ
ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ, 1960 ಹಾಗೂ ಸಂಘದ ನಿಯಮಾವಳಿಗಳ ಪ್ರಕಾರ ಅಧ್ಯಕ್ಷರ ಅಧಿಕಾರಾವಧಿ ಎರಡು ವರ್ಷಗಳಾಗಿದ್ದು, ಆ ಅವಧಿ ಪೂರ್ಣಗೊಂಡ ಬಳಿಕ ಮಹಾಸಭೆ ನಡೆಸಿ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಬೇಕು. ಆದರೆ ಈ ಪ್ರಕ್ರಿಯೆ ಅನುಸರಿಸದೇ ಅಧಿಕಾರ ಮುಂದುವರಿಸಿರುವುದಾಗಿ ಆರೋಪಿಸಿ ಪವನ್ ರಾಜ್ ಕೊಲ್ಯ ಹಾಗೂ ಸಂಘದ ಸದಸ್ಯರು ಜಿಲ್ಲಾ ನೋಂದಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಈ ನಡುವೆ, ಕ್ಷೇತ್ರದ ಆಡಳಿತ ವಿವಾದದಲ್ಲಿ ಮಧ್ಯಪ್ರವೇಶಿಸಿ ದೂರುದಾರರಿಗೆ ಅವಾಚ್ಯವಾಗಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸೂಚನೆ: ಮೇಲಿನ ಆರೋಪಗಳು ದೂರುದಾರರು ಸಲ್ಲಿಸಿರುವ ದೂರಿನಲ್ಲಿರುವ ಆರೋಪಗಳಾಗಿದ್ದು, ಸಂಬಂಧಪಟ್ಟವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರಕರಣದ ಕುರಿತು ತನಿಖೆ ನಡೆಯಬೇಕಿದೆ.
