ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳದ ರಾಜ್ಯ ಮೀನುಗಾರ ಘಟಕದ ಅಧ್ಯಕ್ಷರಾದ ಶ್ರೀ ರತ್ನಾಕರ್ ಸುವರ್ಣ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ನಕಲಿ ಪೋಸ್ಟರ್ ಮೂಲಕ ಹರಡುವ ದುಷ್ಕೃತ್ಯವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎನ್.ಪಿ. ಪುಷ್ಪರಾಜನ್ ತೀವ್ರವಾಗಿ ಖಂಡಿಸಿದ್ದಾರೆ.
ಜೀವಂತವಾಗಿರುವ ವ್ಯಕ್ತಿಯನ್ನು ಮೃತಪಟ್ಟಿದ್ದಾರೆ ಎಂದು ಬಿಂಬಿಸುವುದು ಕೇವಲ ಸುಳ್ಳು ಮಾಹಿತಿ ಹರಡುವ ಕೃತ್ಯವಲ್ಲ; ಅದು ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಅವರ ಕುಟುಂಬದವರು, ಸ್ನೇಹಿತರು ಹಾಗೂ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಮತ್ತು ಗೊಂದಲ ಉಂಟುಮಾಡುವ ಅತ್ಯಂತ ಜವಾಬ್ದಾರಿಯಿಲ್ಲದ ನಡೆ. ಸಾಮಾಜಿಕ ಜಾಲತಾಣಗಳ ದುರುಪಯೋಗದ ಮೂಲಕ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ತನ್ನ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಬೇಕು.
ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದ್ದರೂ, ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದ ಸುಳ್ಳು ಪೋಸ್ಟರ್ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳುವಂತಹ ಕೃತ್ಯವಲ್ಲ. ಇಂತಹ ವಿಕೃತ ಮನೋಭಾವದ ಕೃತ್ಯಗಳು ಸಮಾಜದಲ್ಲಿ ದ್ವೇಷ, ಗೊಂದಲ ಮತ್ತು ಅಶಾಂತಿಯನ್ನು ಸೃಷ್ಟಿಸುವ ಅಪಾಯಕಾರಿ ಬೆಳವಣಿಗೆಯಾಗಿದೆ.
ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ತಕ್ಷಣವೇ ಸಮಗ್ರ ತನಿಖೆ ನಡೆಸಿ, ನಕಲಿ ಪೋಸ್ಟರ್ ಸೃಷ್ಟಿಸಿದ ಹಾಗೂ ಅದನ್ನು ಹರಡಿದ ಎಲ್ಲ ಆರೋಪಿಗಳನ್ನು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪತ್ತೆಹಚ್ಚಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಇತರೆ ಅನ್ವಯವಾಗುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಪಿ. ಪುಷ್ಪರಾಜನ್ ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಪಕ್ಷದ ರಾಜ್ಯ ನಾಯಕರ ಗಮನಕ್ಕೂ ತರಲಾಗಿದ್ದು, ಅಗತ್ಯವಿರುವ ಕಾನೂನು ಮತ್ತು ಸಂಘಟನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಪಕ್ಷ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಕಾರ್ಯಕರ್ತರು, ಪಕ್ಷದ ಬೆಂಬಲಿಗರು ಹಾಗೂ ಸಾರ್ವಜನಿಕರು ಯಾವುದೇ ಸುದ್ದಿಯನ್ನು ಪರಿಶೀಲಿಸದೆ ಹಂಚಿಕೊಳ್ಳಬಾರದು. ವದಂತಿಗಳು ಮತ್ತು ದುರುದ್ದೇಶಪೂರಿತ ಪೋಸ್ಟ್ಗಳಿಗೆ ಉತ್ತೇಜನ ನೀಡದೆ, ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎನ್.ಪಿ. ಪುಷ್ಪರಾಜನ್
ಅಧ್ಯಕ್ಷರು
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
ಜಾತ್ಯಾತೀತ ಜನತಾದಳ (ಜೆಡಿಎಸ್)

