ಮಂಗಳೂರು, ಜು. 26: 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಬಳಸಲ್ಪಟ್ಟ ಹಾಗೂ ಸುಮಾರು ನಾಲ್ಕು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಐತಿಹಾಸಿಕ ಟಿ-55 ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕದ ಆವರಣದಲ್ಲಿ ಭಾನುವಾರ ಸಾರ್ವಜನಿಕರ ವೀಕ್ಷಣೆಗೆ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ನಾಗರಾಜ ಶೆಟ್ಟಿ, ನಿವೃತ್ತ ಯೋಧ ಕರ್ನಲ್ ಶರತ್ ಭಂಡಾರಿ, ಬ್ರಿಗೇಡಿಯರ್ ಜಿನನ್ ರೈ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಡಿಎಫ್ ಅಧ್ಯಕ್ಷ ರಾಘವೇಂದ್ರ, ಸತ್ಯಜಿತ್ ಸುರತ್ಕಲ್ ಸೇರಿದಂತೆ ಅನೇಕ ಗಣ್ಯರು, ನಿವೃತ್ತ ಯೋಧರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ತ ಸೈನಿಕರ ಸಂಘ, ರೋಟರಿ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗಡಿಯಲ್ಲಿ ಸಾವಿರಾರು ಅಡಿ ಎತ್ತರದ ದುರ್ಗಮ ಪ್ರದೇಶಗಳಲ್ಲಿ ಬೆನ್ನಿಗೆ ಸುಮಾರು 25 ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತು, ಸ್ನೈಪರ್ ರೈಫಲ್ ಹಾಗೂ ಇತರ ಯುದ್ಧೋಪಕರಣಗಳೊಂದಿಗೆ ದೇಶವನ್ನು ಕಾಪಾಡುವ ಯೋಧರ ಸಾಹಸವನ್ನು ಸ್ಮರಿಸಿದರು. ದೇಶದ ನಾಗರಿಕರು ನೆಮ್ಮದಿಯಿಂದ ಬದುಕಲು ಯೋಧರು ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಗಡಿಯಲ್ಲಿರುವ ಸೈನಿಕರು ತಮ್ಮ ಎದೆಗೆ ಗುಂಡು ತಿನ್ನುತ್ತಾರೆ ಹೊರತು, ನಾಗರಿಕರ ಬೆನ್ನಿಗೆ ಗುಂಡು ತಾಗದಂತೆ ದೇಶವನ್ನು ರಕ್ಷಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಕದ್ರಿಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸೈನಿಕರಿಗೆ ಗೌರವ ಸಲ್ಲಿಸುವಂತಾಗಬೇಕು ಎಂದು ಕರೆ ನೀಡಿದರು.
ಟಿ-55 ಟ್ಯಾಂಕ್ನ ವೈಶಿಷ್ಟ್ಯಗಳು
ನಿವೃತ್ತ ಯೋಧ ಕ್ಯಾಪ್ಟನ್ ಕಾರ್ಣಿಕ್ ಮಾತನಾಡಿ, 1960ರ ದಶಕದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಟಿ-55 ಯುದ್ಧ ಟ್ಯಾಂಕ್ ಸುಮಾರು 40 ವರ್ಷಗಳ ಕಾಲ ಭೂಸೇನೆಯ ಪ್ರಮುಖ ಶಕ್ತಿಯಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.
2011ರಲ್ಲಿ ಸೇವೆಯಿಂದ ನಿವೃತ್ತಿಗೊಂಡ ಈ ಟ್ಯಾಂಕ್, 1971ರ ಭಾರತ–ಪಾಕಿಸ್ತಾನ ಯುದ್ಧ ಸೇರಿದಂತೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸುಮಾರು 36 ಟನ್ ತೂಕ ಹೊಂದಿರುವ ಈ ಟ್ಯಾಂಕ್ನಲ್ಲಿ ನಾಲ್ವರು ಸೈನಿಕರು ಕಾರ್ಯನಿರ್ವಹಿಸಬಹುದು. ಗಂಟೆಗೆ 50–60 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ, 100 ಎಂಎಂ ರೈಫಲ್ ಗನ್, 7.62 ಎಂಎಂ ಕೋ-ಆಕ್ಸಿಯಲ್ ಮೆಷಿನ್ ಗನ್, 12.7 ಎಂಎಂ ಆಂಟಿ ಏರ್ಕ್ರಾಫ್ಟ್ ಗನ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಒಂದೇ ಬಾರಿ ಸುಮಾರು 500 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.
ಕರ್ನಲ್ ಶರತ್ ಭಂಡಾರಿ ಅಭಿಪ್ರಾಯ
ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಕರ್ನಲ್ ಶರತ್ ಭಂಡಾರಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಅವರ ಸಹೋದ್ಯೋಗಿಗಳಿಗೆ ಪಾಕಿಸ್ತಾನ ಸೇನೆ ನೀಡಿದ ಅಮಾನವೀಯ ಚಿತ್ರಹಿಂಸೆಯನ್ನು ಸ್ಮರಿಸಿದರು.
ಸೌರಭ್ ಕಾಲಿಯಾ ಮತ್ತು ಅವರ ತಂಡವು ಶತ್ರುಗಳ ಚಲನವಲನವನ್ನು ಗಮನಿಸಿ ಮಾಹಿತಿ ಸಂಗ್ರಹಿಸುವ ವೇಳೆ ಪಾಕಿಸ್ತಾನದ ವಶಕ್ಕೆ ಸಿಲುಕಿತ್ತು. ಬಳಿಕ ಅವರಿಗೆ ಕ್ರೂರ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಭಾರತೀಯ ಸೇನೆಯ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಯುದ್ಧದಲ್ಲಿ ಬಳಸಲಾದ ಯಾವುದೇ ಯುದ್ಧೋಪಕರಣವನ್ನು ಪ್ರದರ್ಶನಕ್ಕೆ ಇಡುವಾಗ ಅದರ ಸಂಪೂರ್ಣ ಐತಿಹಾಸಿಕ ಹಿನ್ನೆಲೆ ಹಾಗೂ ಯೋಧರ ತ್ಯಾಗದ ಕಥೆಯನ್ನೂ ಜನರಿಗೆ ತಿಳಿಸುವ ರೀತಿಯಲ್ಲಿ ಪ್ರದರ್ಶಿಸುವುದು ಅತ್ಯಂತ ಅಗತ್ಯ. ಯುದ್ಧ ಸ್ಮಾರಕಗಳು ಕೇವಲ ಶಸ್ತ್ರಾಸ್ತ್ರಗಳ ಪ್ರದರ್ಶನವಲ್ಲ; ಅವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸಾಹಸ, ತ್ಯಾಗ ಮತ್ತು ದೇಶಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೇಂದ್ರಗಳಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಕದ್ರಿಯ ಯುದ್ಧ ಸ್ಮಾರಕದಲ್ಲಿ ಸ್ಥಾಪಿಸಲಾದ ಟಿ-55 ಯುದ್ಧ ಟ್ಯಾಂಕ್ ನಗರದ ಮತ್ತೊಂದು ಐತಿಹಾಸಿಕ ಹೆಗ್ಗುರುತಾಗಿ ರೂಪುಗೊಂಡಿದ್ದು, ಯುವಜನರಲ್ಲಿ ರಾಷ್ಟ್ರಪ್ರೇಮ, ಸೈನಿಕರ ಬಗ್ಗೆ ಗೌರವ ಹಾಗೂ ದೇಶಸೇವೆಯ ಸ್ಪೂರ್ತಿಯನ್ನು ಮೂಡಿಸುವ ಪ್ರಮುಖ ಆಕರ್ಷಣೆಯಾಗಲಿದೆ.

