ಮೂಡುಬಿದಿರೆ, ಜು. 24: ಭಾರತ ಸರ್ಕಾರದ ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ದೇಶದ ಅಮೂಲ್ಯ ಪ್ರಾಚೀನ ಹಸ್ತಪ್ರತಿಗಳನ್ನು ಗುರುತಿಸಿ ಸಂರಕ್ಷಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ 2026ರ ಮಾರ್ಚ್ನಿಂದ ಮೇ ತಿಂಗಳವರೆಗೆ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷಾ ಅಭಿಯಾನ ಕೈಗೊಳ್ಳಲಾಗಿತ್ತು.
ಈ ಅಭಿಯಾನದ ಮುಂದುವರಿದ ಭಾಗವಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಜುಲೈ 24ರಂದು ಸಂಜೆ 6.30ಕ್ಕೆ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಸ್ವಾಮೀಜಿಗಳು, ನಮ್ಮ ದೇಶದ ಇತಿಹಾಸ, ಧರ್ಮ, ತತ್ವಶಾಸ್ತ್ರ, ಸಾಹಿತ್ಯ, ವೈದ್ಯಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಸೇರಿದಂತೆ ಅನೇಕ ಅಮೂಲ್ಯ ಜ್ಞಾನಸಂಪತ್ತನ್ನು ಒಳಗೊಂಡಿರುವ ಪ್ರಾಚೀನ ಹಸ್ತಪ್ರತಿಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ನಿಧಿಯಾಗಿವೆ. ಇಂತಹ ಗ್ರಂಥಗಳನ್ನು ಗುರುತಿಸಿ ವೈಜ್ಞಾನಿಕವಾಗಿ ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ. ಜಿಲ್ಲೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಮನೆ, ಮಠ, ದೇವಸ್ಥಾನ, ಖಾಸಗಿ ಗ್ರಂಥಾಲಯ ಹಾಗೂ ಸಂಸ್ಥೆಗಳಲ್ಲಿ ಸಂರಕ್ಷಿಸಿರುವ ತಾಳೆಓಲೆ ಮತ್ತು ಇತರ ಪ್ರಾಚೀನ ಹಸ್ತಪ್ರತಿಗಳನ್ನು ಸಮೀಕ್ಷೆಗೆ ನೀಡುವ ಮೂಲಕ ಈ ರಾಷ್ಟ್ರೀಯ ಅಭಿಯಾನಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ. ಜಿ.ವಿ. ಕಲ್ಲಾಪುರ, ಡಾ. ವೆಂಕಟೇಶ್ ಎಂ. ಗಿರಿ, ಡಾ. ಕೆ.ಎಸ್.ಎನ್. ಉಡುಪ, ಶ್ರವಣಬೆಳಗೊಳ ಜೈನ ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಅಮೂಲ್ಯ ಗ್ರಂಥ ಭಂಡಾರ ಹಾಗೂ ರಮಾ ರಾಣಿ ಶೋಧ ಸಂಸ್ಥಾನದಲ್ಲಿ ಸಂರಕ್ಷಿಸಲಾಗಿರುವ ಅಪರೂಪದ ತಾಳೆಓಲೆ ಹಸ್ತಪ್ರತಿಗಳ ಸಮೀಕ್ಷೆ ನಡೆಸಲಾಯಿತು. ಮುಂದಿನ ಹಂತದಲ್ಲಿ ಅವುಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣ ಮಾಡಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಸಂರಕ್ಷಿಸುವ ಕಾರ್ಯಕ್ಕೂ ಚಾಲನೆ ನೀಡಲಾಯಿತು.
ಈ ಯೋಜನೆಯ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಚದುರಿಕೊಂಡಿರುವ ಅಮೂಲ್ಯ ಹಸ್ತಪ್ರತಿಗಳನ್ನು ಪತ್ತೆಹಚ್ಚಿ, ಅವುಗಳ ವೈಜ್ಞಾನಿಕ ದಾಖಲೀಕರಣ, ಡಿಜಿಟಲೀಕರಣ ಮತ್ತು ಶಾಶ್ವತ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಭಾರತದ ಜ್ಞಾನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.



