ಉಡುಪಿ, ಜುಲೈ 21: ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ನಡೆದ ಯುವತಿ ಲಾವಣ್ಯ ಅವರ ಅಮಾನುಷ ಹತ್ಯೆ ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು, ಪ್ರಕರಣದ ತನಿಖೆಯನ್ನು ತ್ವರಿತ ಹಾಗೂ ನಿಷ್ಪಕ್ಷಪಾತವಾಗಿ ಪೂರ್ಣಗೊಳಿಸಿ ಮೃತೆಯ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ – ಉಡುಪಿ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರ ಮತ್ತು ಜಿಲ್ಲಾದ್ಯಕ್ಷ ಫ್ರಾಂಕಿ ಡಿಸೋಜ ರವರ ಉಪಸ್ಥಿತಿಯಲ್ಲಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗಲಕ್ಷ್ಮಿ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಪದಾಧಿಕಾರಿಗಳು, ಬಿ.ಸಿ.ರೋಡ್ನಲ್ಲಿ ನಡೆದ ಈ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಆತಂಕ ಮೂಡಿಸಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹವಾದರೂ, ಕೇವಲ ಬಂಧನದಿಂದ ನ್ಯಾಯ ಪೂರ್ಣಗೊಳ್ಳುವುದಿಲ್ಲ. ಯಾವುದೇ ಒತ್ತಡಗಳಿಗೆ ಮಣಿಯದೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಶೀಘ್ರದಲ್ಲೇ ಬಲಿಷ್ಠ ದೋಷಾರೋಪಣಾ ಪತ್ರ ಸಲ್ಲಿಸಿ, ನ್ಯಾಯಾಲಯದಲ್ಲಿ ಸಮರ್ಥವಾಗಿ ಪ್ರಕರಣವನ್ನು ಮಂಡಿಸುವ ಮೂಲಕ ಆರೋಪಿಗೆ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಅಲ್ಲದೆ, ಮೃತ ಲಾವಣ್ಯ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಆರ್ಥಿಕ ಪರಿಹಾರ, ಪುನರ್ವಸತಿ ಸೌಲಭ್ಯಗಳು ಹಾಗೂ ಅಗತ್ಯ ಕಾನೂನು ನೆರವು ಒದಗಿಸಲು ಸಂಬಂಧಿಸಿದ ಇಲಾಖೆಗೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಲಾಯಿತು.
ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಬಲಪಡಿಸುವುದು, ರಾತ್ರಿ ಭದ್ರತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ಹಾಗೂ ಮಹಿಳೆಯರ ಸುರಕ್ಷತೆಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ – ಉಡುಪಿ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಲಾವಣ್ಯ ಪ್ರಕರಣದಲ್ಲಿ ತ್ವರಿತ ನ್ಯಾಯ ದೊರಕಬೇಕು ಹಾಗೂ ಇಂತಹ ಅಮಾನವೀಯ ಕೃತ್ಯಗಳಿಗೆ ಕಾನೂನಿನ ಮೂಲಕ ಕಠಿಣ ಸಂದೇಶ ನೀಡಬೇಕೆಂದು ಒತ್ತಾಯಿಸಿದರು.ನಿಯೋಗದಲ್ಲಿ ಸುರೇಂದ್ರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ, ಶರತ್ ರಾಜ್ ಆರೂರು, ಬ್ರಹ್ಮವರ್ ತಾಲೂಕು ಅಧ್ಯಕ್ಷರು ಕೃಷ್ಣ ಮಾರ್ಪಳ್ಳಿ, ಜಿಲ್ಲಾ ಸಹ ಕಾರ್ಯದರ್ಶಿ, ಮನೋಜ್ ಕೆ ಜಿ ರೋಡ್, ನಿತಿನ್ ಕುಮಾರ್ ಶೆಟ್ಟಿ ಕಾಪು ತಾಲೂಕು ಅಧ್ಯಕ್ಷರು , ರಾಕೇಶ್, ಅಜಯ್, ಸದಸ್ಯರು. ಸೋಮಶೇಖರ್, ಅನುಸೂಯ ಕಾಪು ತಾಲೂಕು ಘಟಕದ ಅಧ್ಯಕ್ಷರು, ಪವಿತ್ರ ಜಿಲ್ಲಾ ಪ್ರಧಾನ ಮಹಿಳಾ ಕಾರ್ಯದರ್ಶಿ, ಸಂಘಟನ ಕಾರ್ಯದರ್ಶಿ ನಿರ್ಮಲ ಮೆಂಡನ್ ಸಾಂಸ್ಕೃತಿಕ ಅಧ್ಯಕ್ಷರು ಮಂಜುಳಾ, ಗುಲಾಬಿ , ಪುಷ್ವ , ವನಿತಾ ಜಿಲ್ಲಾ ಜೊತೆ ಕಾರ್ಯದರ್ಶಿ, ಗಾಯತ್ರಿ ಜಿಲ್ಲಾ ಉಪಾಧ್ಯಕ್ಷರು, ಮಮತಾ ಜೊತೆ ಸಂಘಟನಾ ಕಾರ್ಯದರ್ಶಿ ಮಹಿಳಾ ಮುಖಂಡರಾದ ಪುಷ್ಪಲತಾ ಶಂಕರ್, ಸುಲೋಚನ ಪೂಜಾರ್ತಿ, ಗುಲಾಬಿ, ಧನವತಿ, ಹರಿಣಾಕ್ಷಿ, ರಾಜೇಶ್ವರಿ, ಶ್ಯಾಮಲ ಮತ್ತಿತರರು ಉಪಸ್ಥಿತರಿದ್ದರು






