ಪುತ್ತೂರು, ಜುಲೈ 8: ಕಂಬಳ ಕ್ಷೇತ್ರದ ಖ್ಯಾತ ವೀಕ್ಷಕ ವಿವರಣೆಗಾರ, ಕಾಂಗ್ರೆಸ್ ಮುಖಂಡ ಹಾಗೂ ಪುತ್ತೂರು ಭೂನ್ಯಾಯ ಮಂಡಳಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟು (60) ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿದ್ದ ಭೂನ್ಯಾಯ ಮಂಡಳಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವೇಳೆ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿ ಕುಸಿದುಬಿದ್ದರು. ತಕ್ಷಣವೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ನಿರಂಜನ್ ರೈ ಮಠಂತಬೆಟ್ಟು ಅವರು ಕಂಬಳ ಲೋಕದಲ್ಲಿ ತಮ್ಮ ವಿಶಿಷ್ಟ ತುಳು ವೀಕ್ಷಕ ವಿವರಣೆ ಹಾಗೂ ಮನಮೋಹಕ ನಿರೂಪಣೆಯ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು. ಅವರ ಧ್ವನಿ ಮತ್ತು ಶೈಲಿ ಕಂಬಳ ಪ್ರೇಮಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೋಡಿಂಬಾಡಿ ಮಹಿಷಮರ್ದಿನಿ ದೇವಳದ ಆಡಳಿತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಹಾಗೂ ಬಂಟರ ಸಂಘದ ಕ್ರಿಯಾಶೀಲ ಸದಸ್ಯರಾಗಿ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸರಳ ವ್ಯಕ್ತಿತ್ವ, ಸಜ್ಜನಿಕೆ ಮತ್ತು ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದ ನಿರಂಜನ್ ರೈ ಮಠಂತಬೆಟ್ಟು ಅವರ ಅಗಲಿಕೆ ಕಂಬಳ ಕ್ಷೇತ್ರ, ಸಾಮಾಜಿಕ ವಲಯ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಹಾಗೂ ಕಂಬಳಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

