ಹೆಬ್ರಿ, ಜುಲೈ 7: ಹೆಬ್ರಿ ತಾಲೂಕಿನಲ್ಲಿ ಪೊಲೀಸ್ ಇಲಾಖೆ, ಸರ್ಕಾರಿ ಶಾಲೆಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಉಂಟಾಗಿರುವ ತೀವ್ರ ಸಿಬ್ಬಂದಿ ಕೊರತೆಯನ್ನು ತುರ್ತಾಗಿ ನಿವಾರಿಸಿ, ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಹೆಬ್ರಿ ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರಿಗೆ ಅಗತ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಜನರು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದ್ದು, ಆಡಳಿತದ ಕಾರ್ಯಕ್ಷಮತೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅಗತ್ಯ ಸಂಖ್ಯೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲದಿರುವ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡುವುದು ಹಾಗೂ ಸಂಚಾರ ನಿಯಂತ್ರಣ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತೊಂದರೆಯಾಗುತ್ತಿದೆ. ಈ ಪರಿಸ್ಥಿತಿ ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ, ತಾಲೂಕಿನ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಇರುವುದರಿಂದ ಶಾಲೆಗಳ ಆಡಳಿತಾತ್ಮಕ ಕಾರ್ಯಗಳು, ಶೈಕ್ಷಣಿಕ ಯೋಜನೆಗಳ ಅನುಷ್ಠಾನ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶಿಕ್ಷಣದ ಗುಣಮಟ್ಟ ಕಾಪಾಡಲು ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು ಅಗತ್ಯ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕಂದಾಯ, ಗ್ರಾಮ ಆಡಳಿತ, ಸಮಾಜ ಕಲ್ಯಾಣ, ಕೃಷಿ, ಆರೋಗ್ಯ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿಯೂ ಸಿಬ್ಬಂದಿಗಳ ಕೊರತೆಯಿಂದ ಆದಾಯ, ಜಾತಿ ಹಾಗೂ ವಾಸಸ್ಥಳ ಪ್ರಮಾಣಪತ್ರಗಳು, ಪಿಂಚಣಿ, ಸರ್ಕಾರ
ವಿವಿಧ ಯೋಜನೆಗಳ ಅರ್ಜಿಗಳ ವಿಲೇವಾರಿ ಸೇರಿದಂತೆ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿದ್ದು, ಜನರು ಅನಗತ್ಯವಾಗಿ ಹಲವು ಬಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಮಸ್ಯೆಗಳ ಕುರಿತು ಜನರ ಪರವಾಗಿ ನಿರಂತರವಾಗಿ ಪ್ರಶ್ನಿಸಿ ಪರಿಹಾರ ಒದಗಿಸಲು ಸ್ಥಳೀಯ ಜನಪ್ರತಿನಿಧಿಗಳ ಅಗತ್ಯವಿದೆ. ಆದರೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಹಲವು ವರ್ಷಗಳಿಂದ ನಡೆಯದ ಕಾರಣ ಸ್ಥಳೀಯ ಮಟ್ಟದಲ್ಲಿ ಚುನಾಯಿತ ಜನಪ್ರತಿನಿಧಿಗಳೇ ಇಲ್ಲದಿರುವುದು ಜನರ ಸಮಸ್ಯೆಗಳು ಮತ್ತಷ್ಟು ಗಂಭೀರವಾಗಲು ಕಾರಣವಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.
ಆದ್ದರಿಂದ ಹೆಬ್ರಿ ತಾಲೂಕಿನ ಜನರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ, ಸರ್ಕಾರಿ ಶಾಲೆಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಿ, ಅಗತ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಾರ್ವಜನಿಕ ಸೇವೆಗಳು ಸುಗಮವಾಗಿ ಲಭ್ಯವಾಗುವಂತೆ ಜಿಲ್ಲಾಡಳಿತ ಸರ್ಕಾರದ ಗಮನ ಸೆಳೆದು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

