ಮಂಗಳೂರು, ಜುಲೈ 6: ನಗರದ ಬೈಕಂಪಾಡಿ ಸಮೀಪ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ದರೋಡೆ ನಡೆಸಿದ ಬಹುಚರ್ಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಅವರ ಫೋಟೋಗಳು ಹಾಗೂ ಗುರುತು ವಿವರಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಈ ದರೋಡೆ ಕೃತ್ಯದ ಮಾಸ್ಟರ್ ಮೈಂಡ್ ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ಎಂಬುದು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳು ಭಾಗಿಯಾಗಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ವಿವಿಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಕೇರಳದ ವಿವಿಧ ಜಿಲ್ಲೆಗಳು ಹಾಗೂ ಕೇರಳ-ಕರ್ನಾಟಕ ಗಡಿ ಭಾಗಗಳಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಕೇರಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಹಲವು ಸ್ಥಳಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೊಲೀಸರು ಗುರುತು ಬಹಿರಂಗಪಡಿಸಿರುವ ಆರೋಪಿಗಳಲ್ಲಿ ಶ್ರೀರಾಗ್, ಅತುಲ್, ಮಿಥುನ್ಲಾಲ್, ಅಜೀರ್ ತರಾಯಿಲ್, ವೈತಾಕ್, ಆಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್ ಸೇರಿದಂತೆ ಒಟ್ಟು 14 ಮಂದಿ ಸೇರಿದ್ದಾರೆ. ಇವರಲ್ಲಿ ಕೊಡಗು ಜಿಲ್ಲೆಯ ಕೆಲವರೂ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ಹೇಗೆ ನಡೆದಿತ್ತು?
ಜೂನ್ 29ರ ನಸುಕಿನ ವೇಳೆ ಮಂಗಳೂರಿನ ಬೈಕಂಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಅವರನ್ನು ಆರೋಪಿಗಳು ಅಡ್ಡಗಟ್ಟಿದ್ದರು. ಬಳಿಕ ಅವರ ಮೇಲೆ ಹಲ್ಲೆ ನಡೆಸಿ, ಸುಮಾರು 180 ಗ್ರಾಂ ಚಿನ್ನ ಹಾಗೂ ಒಟ್ಟು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನಿಮಿಲ್ (ತಲಕ್ಕೇರಿ), ಇರ್ಷಾದ್ (ಮಡಿಕೇರಿ) ಹಾಗೂ ಮುಸ್ತಾಫ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವ ಪೊಲೀಸರು, ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ
ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

