ಹೆಬ್ರಿ, ಜೂನ್ 24: ಸಾರ್ವಜನಿಕರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಮುಖ ಕೇಂದ್ರವಾಗಿರುವ ಹೆಬ್ರಿ ಪೊಲೀಸ್ ಠಾಣೆಯು ಪೇಟೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಕಾಡಿನ ಮಧ್ಯೆ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪೂಜಾರಿ ಕುಚ್ಚೂರು ಆರೋಪಿಸಿದ್ದಾರೆ.
ಪೊಲೀಸ್ ಠಾಣೆಗೆ ಸಂಪರ್ಕಿಸುವ ರಸ್ತೆಯು ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ರಸ್ತೆ ಡಾಂಬರೀಕರಣಗೊಂಡಿಲ್ಲದ ಕಾರಣ ಸಾರ್ವಜನಿಕರು ಕಷ್ಟಪಟ್ಟು ಠಾಣೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರಸ್ತೆಯುದ್ದಕ್ಕೂ ದಾರಿದೀಪಗಳ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ತುರ್ತು ಸಂದರ್ಭದಲ್ಲಿ ದೂರು ದಾಖಲಿಸಲು ಅಥವಾ ಪೊಲೀಸ್ ನೆರವು ಪಡೆಯಲು ಬರುವ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಭಯ ಮತ್ತು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೆಬ್ರಿ ಪೇಟೆಯ ಸಮೀಪದಲ್ಲೇ ಸಾರ್ವಜನಿಕ ಸೌಲಭ್ಯಗಳಿಗೆ ಅನುಕೂಲಕರವಾದ ಸ್ಥಳಗಳಿದ್ದರೂ, ಪೊಲೀಸ್ ಠಾಣೆಯನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ಸ್ಥಾಪಿಸಿರುವುದು ಸಾರ್ವಜನಿಕ ಸೇವೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದೆ. ಪೇಟೆಯಿಂದ ಕೇವಲ 300 ಮೀಟರ್ ದೂರದಲ್ಲಿರುವ ಪ್ರವಾಸಿ ಮಂದಿರ (ಐಬಿ) ಆವರಣದಂತಹ ಕೇಂದ್ರ ಸ್ಥಳದಲ್ಲಿ ಪೊಲೀಸ್ ಠಾಣೆ ಇದ್ದಿದ್ದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ, ವಿಶೇಷವಾಗಿ ಮಹಿಳಾ ಸಿಬ್ಬಂದಿ, ರಾತ್ರಿ ವೇಳೆಯಲ್ಲಿ ಸೊಳ್ಳೆಗಳ ಕಾಟ, ಕಾಡು ಪ್ರದೇಶದ ಪರಿಸರ ಹಾಗೂ ಸೂಕ್ತ ಮೂಲಸೌಕರ್ಯಗಳ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಶ್ರಮಿಸುವ ಪೊಲೀಸರಿಗೇ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಲಭ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಶ್ರೀಕಾಂತ್ ಪೂಜಾರಿ ಹೇಳಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಸಚಿವರು, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೆಬ್ರಿ ಪೊಲೀಸ್ ಠಾಣೆಯನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಬಹುದಾದ ಪೇಟೆಯ ಕೇಂದ್ರ ಭಾಗಕ್ಕೆ ಅಥವಾ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಸ್ಥಳಾಂತರ ಸಾಧ್ಯವಾಗದಿದ್ದರೆ ಠಾಣೆಗೆ ಸಂಪರ್ಕಿಸುವ ರಸ್ತೆಯನ್ನು ತುರ್ತಾಗಿ ಅಭಿವೃದ್ಧಿಪಡಿಸಿ, ದಾರಿದೀಪ, ಭದ್ರತಾ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


