ತ್ರಿಶೂರ್: ಕೇರಳದ ತ್ರಿಶೂರ್ ಪೂರಂ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾಗಲೇ ದೊಡ್ಡ ದುರಂತ ಸಂಭವಿಸಿದ್ದು, ತಿರುವಂಬಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಪಟಾಕಿ ಕಾರ್ಖಾನೆಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ್ದು, 20 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವಾರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ

ಅಧಿಕಾರಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 70 ಕಾರ್ಮಿಕರು ಕಾರ್ಖಾನೆಯಲ್ಲಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಕುಂದನೂರಿನವರು ಎನ್ನಲಾಗಿದೆ.
ಈ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಹತ್ತಿರದ ಅನೇಕ ನಿವಾಸಿಗಳು ಆರಂಭದಲ್ಲಿ ಇದನ್ನು ಭೂಕಂಪ ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಆ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ ನಂತರ ಇದು ಸ್ಫೋಟ ಎಂದು ತಿಳಿದು ಬಂದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕ್ಕೋಡ್ನಲ್ಲಿ ನಡೆದ ಭೀಕರ ಪಟಾಕಿ ಸ್ಫೋಟ ಪ್ರಕರಣದ ನಂತರ, ಇದೇ ತಿಂಗಳ 24ರಂದು ನಡೆಯಲಿರುವ ಪ್ರಸಿದ್ಧ ತ್ರಿಶೂರ್ ಪೂರಂ ಉತ್ಸವದ ಪಟಾಕಿ ಪ್ರದರ್ಶನ ನಡೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರವೇ ಕೈಗೊಳ್ಳಲಿದೆ ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ತಿರುವಾಂಬಾಡಿ ದೇವಸ್ಥಾನದ ಸಮೀಪದಲ್ಲಿ ಪೂರಂ ಹಬ್ಬದ ಅಂಗವಾಗಿ ಸಂಗ್ರಹಿಸಲಾಗಿದ್ದ ಪಟಾಕಿಗಳ ಶೆಡ್ನಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮವಾಗಿ ಪ್ರದೇಶದೆಲ್ಲೆಡೆ ಬೆಂಕಿ ವ್ಯಾಪಿಸಿ, ಪಟಾಕಿಗಳು ಸರಣಿ ಸ್ಫೋಟಗೊಂಡ ಶಬ್ದ ಹಲವು ಕಿಲೋಮೀಟರ್ಗಳವರೆಗೆ ಕೇಳಿಬಂದಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ.
ಘಟನೆಯ ನಂತರ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, ಇದುವರೆಗೆ 13 ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟು 23 ಗಾಯಾಳುಗಳನ್ನು ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 8 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸ್ಫೋಟ ಸಂಭವಿಸಿದ ಸಮಯದಲ್ಲಿ ಸ್ಥಳದಲ್ಲಿ ಸುಮಾರು 30 ರಿಂದ 40 ಮಂದಿ ಇದ್ದರು ಎಂದು ಜಿಲ್ಲಾಧಿಕಾರಿ ಶಿಖಾ ಸುರೇಂದ್ರನ್ ತಿಳಿಸಿದ್ದಾರೆ. ಸ್ಫೋಟದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಪೊಲೀಸರು ಮತ್ತು ತಜ್ಞರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸೇರಿ ಸಮನ್ವಯದಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ವೇಗವಾಗಿ ನಡೆಸುತ್ತಿವೆ. ಪರವಾನಗಿ ಹೊಂದಿದ್ದ ಸ್ಥಳೀಯ ಸಂಗ್ರಹಣೆ ನಿರ್ವಹಕರೂ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ, ಪೂರಂ ಉತ್ಸವದ ಪ್ರಮುಖ ಆಕರ್ಷಣೆಯಾದ ಪಟಾಕಿ ಪ್ರದರ್ಶನವನ್ನು ನಡೆಸಬೇಕೇ ಬೇಡವೇ ಎಂಬುದರ ಕುರಿತು ರಾಜ್ಯ ಸರ್ಕಾರ ತುರ್ತು ಸಭೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.






