ಬೆಂಗಳೂರು, ಮಾ.12: ರಾಜ್ಯ ಸೈಬರ್ ಕಮಾಂಡ್ ಯೂನಿಟ್ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಚೀನಾದ ಸೈಬರ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಮಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಡಿಜಿಪಿ Pranav Mohanty ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಯಲ್ಲಿ ಆರೋಪಿಗಳು “ಟ್ರೇಡಿಂಗ್ ಬಿಸಿನೆಸ್” ಹೆಸರಿನಲ್ಲಿ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿ, ಬಳಿಕ ಆ ಖಾತೆಗಳನ್ನು ಸೈಬರ್ ವಂಚನೆಗೆ ಬಳಸುತ್ತಿದ್ದರೆಂದು ಬಹಿರಂಗವಾಗಿದೆ.
ಭಾರೀ ಪ್ರಮಾಣದ ವಸ್ತುಗಳ ವಶ:
ಪೊಲೀಸರು ಬಂಧಿತರ ಬಳಿಯಿಂದ 4 ಮೊಬೈಲ್ ಫೋನ್ಗಳು, 18 ಡೆಬಿಟ್ ಕಾರ್ಡ್ಗಳು, 17 ಬ್ಯಾಂಕ್ ಪಾಸ್ಬುಕ್ಗಳು, 6 ಚೆಕ್ ಪುಸ್ತಕಗಳು, 1,479.31 USDT ಮೌಲ್ಯದ ಕ್ರಿಪ್ಟೋಕರೆನ್ಸಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಚೀನಾದೊಂದಿಗೆ ಕ್ರಿಪ್ಟೋ ದಂಧೆ:
ತನಿಖೆ ಪ್ರಕಾರ, ಚೀನಾದ ಸೈಬರ್ ವಂಚಕರಿಗೆ ಕಡಿಮೆ ದರದಲ್ಲಿ ಕ್ರಿಪ್ಟೋಕರೆನ್ಸಿ ಒದಗಿಸಲು ಆರೋಪಿಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾರತದಲ್ಲಿ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿ ಖರೀದಿಸಿ, ನಂತರ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಚೀನಾದ ವಂಚಕರೊಂದಿಗೆ ಸಂಪರ್ಕ ಸಾಧಿಸಿ ಅದನ್ನೇ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು.
ಈ ವ್ಯವಹಾರಗಳ ಪ್ರತಿಯಾಗಿ ಆರೋಪಿಗಳು ಭಾರತೀಯ ಕರೆನ್ಸಿಯಲ್ಲಿ ಹಣ ಸ್ವೀಕರಿಸುತ್ತಿದ್ದರು. ಇದಕ್ಕಾಗಿ ಮಂಗಳೂರು ನಗರದ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿ, ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಚೀನಾದ ಸೈಬರ್ ವಂಚಕರಿಗೆ ಒದಗಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ದೇಶದಾದ್ಯಂತ 88 ಕ್ಕೂ ಹೆಚ್ಚು ಪ್ರಕರಣಗಳು:
ಚೀನಾದ ವಂಚಕರು ಆ ಖಾತೆಗಳಿಗೆ ಸೈಬರ್ ಮೋಸದ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದು, ಈ ಜಾಲದಲ್ಲಿ ಬಳಸಲಾಗಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ 88 ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.
ಚೀನಾದ ಸೈಬರ್ ವಂಚನೆ ಬಗ್ಗೆ ಸಂಪೂರ್ಣ ಅರಿವಿದ್ದರೂ ಸಹ ಹಣದ ಆಸೆಗೆ ಆರೋಪಿಗಳು ಈ ಜಾಲಕ್ಕೆ ಸಹಕಾರ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

