ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪದ ಹಿನ್ನೆಲೆ, ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆ ಘೋಷಣೆಯ ಸಂದರ್ಭದಲ್ಲಿ ಅನುಸರಿಸಿದ ಮಾನದಂಡಗಳ ಅಧ್ಯಯನಕ್ಕಾಗಿ ಸರ್ಕಾರ ನೇಮಿಸಿದ್ದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಆರು ಸದಸ್ಯರ ಸಮಿತಿ ರಚಿಸಲಾಗಿತ್ತು.
ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ ಹಾಗೂ ವಿವಿಧ ಇಲಾಖೆಗಳು ಮತ್ತು ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ವೇಳೆ ಅನುಸರಿಸಿದ ವಿಧಿವಿಧಾನಗಳು ಮತ್ತು ಆಡಳಿತಾತ್ಮಕ ಮಾನದಂಡಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿತು.
ಅಧ್ಯಯನದ ಬಳಿಕ ಸಿದ್ಧಪಡಿಸಿದ ವರದಿಯನ್ನು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಅವರಿಗೆ ಸಮಿತಿ ಸದಸ್ಯರು ಅಧಿಕೃತವಾಗಿ ಸಲ್ಲಿಸಿದರು. ವರದಿಯೊಂದಿಗೆ ತುಳು ಭಾಷೆಯ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಭಾಷಾ ವೈಶಿಷ್ಟ್ಯಗಳ ಕುರಿತು ಸಮಗ್ರ ಪ್ರಸ್ತಾವನೆಯನ್ನು ಕೂಡ ಜೋಡಿಸಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಅಧ್ಯಯನ ಸಮಿತಿ ಸದಸ್ಯರಾದ ಸುಧಾಕರ ಶೆಟ್ಟಿ (ಯಕ್ಷಗಾನ ಅಕಾಡೆಮಿ), ಕಾನೂನು ಇಲಾಖೆಯ ಉಪಕಾರ್ಯದರ್ಶಿ ಶ್ರೀಮತಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪಕಾರ್ಯದರ್ಶಿ ಮೂರ್ತಿ ಕೆ.ಎನ್., ಅಧೀನ ಕಾರ್ಯದರ್ಶಿ ಶ್ರೀಮತಿ ಕೆ.ಎಂ. ಶುಭಶ್ರೀ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿದ್ದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಿಸುವ ಹಾದಿಯಲ್ಲಿ ಈ ವರದಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.





