ಕುಂದಾಪುರ, ಜು. 31: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದ್ದು, ರೌಡಿಶೀಟರ್ ಐವನ್ ರಿಚಾರ್ಡ್ ಮಸ್ಕರೇನಸ್ ಅಲಿಯಾಸ್ ಮುನ್ನಾ ಗುಂಡೇಟಿಗೆ ಬಲಿಯಾಗಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಜುಲೈ 30ರ ರಾತ್ರಿ ಐವನ್ ಹಾಗೂ ಡೆರಿಕ್ ಕ್ರಾಸ್ತಾ ನಡುವೆ ಹಣಕಾಸಿನ ವ್ಯವಹಾರದ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿತ್ತು. ಬಳಿಕ ಡೆರಿಕ್ ತನ್ನ ಲೊಕೇಶನ್ ಅನ್ನು ಕಳುಹಿಸಿ, ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸಾರಿ ಚರ್ಚ್ ಎದುರು ಬರಲು ಸೂಚಿಸಿದ್ದಾನೆ ಎನ್ನಲಾಗಿದೆ.
ಜುಲೈ 31ರ ಮುಂಜಾನೆ ಸುಮಾರು 3.15ರ ವೇಳೆಗೆ ಐವನ್ ಸ್ಥಳಕ್ಕೆ ಥಾರ್ ಕಾರಿನಲ್ಲಿ ಆಗಮಿಸಿದ್ದಾನೆ. ಕಾರಿನಿಂದ ಇಳಿದ ತಕ್ಷಣ ಆರೋಪಿ ಡೆರಿಕ್ ಕ್ರಾಸ್ತಾ ಗನ್ನಿಂದ ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ 3 ಮತ್ತು 25ನೇ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಮೃತ ಐವನ್ ಅಲಿಯಾಸ್ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ಮುನ್ನಾ ಆರಂಭದಲ್ಲಿ ಪಿಟ್ಟಿ ನಾಗೇಶ್ ಅವರ ಚಾಲಕರಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದ್ದು, ಬಳಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಪಿಟ್ಟಿ ನಾಗೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದನೆಂಬ ಆರೋಪ ಎದುರಿಸುತ್ತಿದ್ದ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಈ ಹಿಂದೆ ಹಲವು ಬಾರಿ ಹಲ್ಲೆ ನಡೆಸುವ ಹಾಗೂ ಹತ್ಯೆಗೆ ಸಂಚು ರೂಪಿಸಿರುವ ಮಾಹಿತಿ ಕೂಡ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಪ್ರಕರಣದ ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
