ಮಂಗಳೂರು, ಜೂನ್ 24: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಗ್ರೂಪ್-ಡಿ ಮಹಿಳಾ ನೌಕರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ಕೈಗೊಳ್ಳಲಾಗಿತ್ತು. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಲ್ಲಿಸಿದ ವರದಿ, ಸಾಕ್ಷಿದಾರರ ಲಿಖಿತ ಹೇಳಿಕೆಗಳು ಹಾಗೂ ಇತರ ದಾಖಲೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಪರಿಶೀಲನೆ ನಡೆಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದರ ಜೊತೆಗೆ ಲಭ್ಯವಿರುವ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪವು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಇದರ ಪರಿಣಾಮವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳಡಿ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಚಂದ್ರಶೇಖರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಅವರ ಲೀನ್ ಅನ್ನು ಹಾಸನ ಜಿಲ್ಲೆಯ ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದ್ದು, ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯದಂತೆ ಸೂಚಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ. ರಜನಿ ಎಂ. ಅವರು ಜೂನ್ 23ರಂದು ಈ ಆದೇಶ ಹೊರಡಿಸಿದ್ದಾರೆ.


