ಮಂಡ್ಯ, ಜೂನ್ 25: ಪ್ರವಾಸದ ಸಂತಸ ಕ್ಷಣಗಳು ಕೆಲವೇ ನಿಮಿಷಗಳಲ್ಲಿ ಶೋಕಸಾಗರವಾಗಿ ಮಾರ್ಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ. ಫೋಟೋ ತೆಗೆಯುವ ವೇಳೆ ಕಾವೇರಿ ನದಿಗೆ ಇಳಿದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಮೃತರನ್ನು ಶ್ವೇತಾ (38), ಚೈತ್ರ (20), ವಿಜಯಮ್ಮ (50), ಪ್ರಿಯಾಂಕಾ (28) ಹಾಗೂ ಕಾರು ಚಾಲಕ ಮಹೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚನ್ನಪಟ್ಟಣ ಮೂಲದವರಾಗಿದ್ದು, ಕುಟುಂಬ ಸಮೇತ ಮುತ್ತೆತ್ತರಾಯ ದೇವಾಲಯಕ್ಕೆ ಭೇಟಿ ನೀಡಿದ್ದರು.
ದೇವರ ದರ್ಶನ ಮತ್ತು ಪೂಜೆ ಬಳಿಕ ಕುಟುಂಬಸ್ಥರು ಸಂಜೆ ವೇಳೆಗೆ ಕಾವೇರಿ ನದಿ ತಟಕ್ಕೆ ತೆರಳಿದ್ದರು. ನೆನಪಿಗಾಗಿ ಫೋಟೋ ತೆಗೆಯಲು ನೀರಿಗೆ ಇಳಿದಾಗ ವಿಜಯಮ್ಮ ಅವರು ಆಳವಾದ ಭಾಗಕ್ಕೆ ತೆರಳಿ ಮುಳುಗತೊಡಗಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಉಳಿದವರೂ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರು ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ಹೋಂ ಗಾರ್ಡ್ ಸಿಬ್ಬಂದಿ ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದ್ದರೂ, ನೀರಿನ ಆಳ ಕಡಿಮೆ ಎಂದು ಭಾವಿಸಿದ್ದ ಕುಟುಂಬಸ್ಥರು ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರೆಂದು ಹೇಳಲಾಗಿದೆ.
ಕುಟುಂಬದ ಮುಖ್ಯಸ್ಥ ರವಿ ಕೂಡ ರಕ್ಷಣಾ ಪ್ರಯತ್ನಕ್ಕೆ ಧಾವಿಸಿದ್ದರು. ಆದರೆ ಅವರು ಸಹ ನೀರಿನಲ್ಲಿ ಸಿಲುಕಿದ ವೇಳೆ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ರವಿ ಹಾಗೂ ನಾಲ್ಕು ವರ್ಷದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬದುಕುಳಿದ ರವಿಯ ಕಣ್ಣೀರಿನ ನುಡಿ
“ಕಬ್ಬಾಳಮ್ಮ ದೇವರ ದರ್ಶನದ ಬಳಿಕ ಮುತ್ತತ್ತಿಗೆ ಬಂದಿದ್ದೆವು. ಸ್ನಾನಕ್ಕೆ ನದಿಗೆ ಇಳಿದಾಗ ಒಬ್ಬರು ಕಾಲು ಜಾರಿ ಬಿದ್ದರು. ಅವರನ್ನು ಉಳಿಸಲು ಉಳಿದವರು ಮುಂದಾದರು. ನಾನು ಸಹ ರಕ್ಷಿಸಲು ಹೋದಾಗ ನೀರಿನಲ್ಲಿ ಸಿಲುಕಿದ್ದೆ. ಸ್ಥಳೀಯರು ನನ್ನನ್ನು ರಕ್ಷಿಸಿದರು,” ಎಂದು ರವಿ ಘಟನೆಯ ಭೀಕರ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಒಂದು ಫೋಟೋಗಾಗಿ ನದಿಗೆ ಇಳಿದ ಕುಟುಂಬ, ಕೆಲವೇ ಕ್ಷಣಗಳಲ್ಲಿ ಐದು ಜೀವಗಳನ್ನು ಕಳೆದುಕೊಂಡ ದುರಂತ ಮುತ್ತತ್ತಿ ಕಾವೇರಿ ತಟವನ್ನು ಶೋಕದಲ್ಲಿ ಮುಳುಗಿಸಿದೆ.
