ಉಡುಪಿ: ಕರ್ನಾಟಕ ಕರಾವಳಿ ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಅಂತಾರಾಜ್ಯ ಮೀನುಗಾರಿಕಾ ಸಮಸ್ಯೆಗಳ ಕುರಿತು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಮಹಾರಾಷ್ಟ್ರ ಸರ್ಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರನ್ನು ಸಚಿವಾಲಯದ ಕಚೇರಿಯಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ರಾಜ್ಯಗಳ ಗಡಿಭಾಗ ಹಾಗೂ ನಿಯಮಾವಳಿಗಳ ಬಗ್ಗೆ ಸಮನ್ವಯ ಕೊರತೆಯಿಂದಾಗಿ ಅನೇಕ ಬಾರಿ ಮಹಾರಾಷ್ಟ್ರ ಮೀನುಗಾರಿಕಾ ಇಲಾಖೆ ಪ್ರಕರಣಗಳನ್ನು ದಾಖಲಿಸಿ ಭಾರೀ ದಂಡ ವಿಧಿಸುವ ಘಟನೆಗಳು ನಡೆಯುತ್ತಿವೆ. ಇದರಿಂದ ಕರಾವಳಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ಶಾಸಕ ಸುವರ್ಣ ಸಚಿವರ ಗಮನಕ್ಕೆ ತಂದರು.
ಅಂತಾರಾಜ್ಯ ಮಟ್ಟದಲ್ಲಿ ಸಮನ್ವಯ ವ್ಯವಸ್ಥೆ ರೂಪಿಸಿ ಇಂತಹ ಪ್ರಕರಣಗಳನ್ನು ಮರುಪರಿಶೀಲಿಸಿ ಮೀನುಗಾರರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಜೊತೆಗೆ ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ರಾಜ್ಯಗಳ ನಡುವೆ ಸಮಗ್ರ ಸಮನ್ವಯ ಸಾಧಿಸಲು ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಮಟ್ಟದ ಸಮನ್ವಯ ಸಮಿತಿ ಬೇಡಿಕೆ
ಎಲ್ಲಾ ಕರಾವಳಿ ರಾಜ್ಯಗಳ ಮೀನುಗಾರಿಕಾ ಸಚಿವರು ಹಾಗೂ ಮೀನುಗಾರ ಮುಖಂಡರನ್ನು ಒಳಗೊಂಡ ಅಂತಾರಾಜ್ಯ ಸಮನ್ವಯ ಸಮಿತಿ ರಚನೆ ಮಾಡುವಂತೆ ಶಾಸಕ ಸುವರ್ಣ ಮನವಿ ಮಾಡಿದರು. ಈ ಸಂಬಂಧ ಈಗಾಗಲೇ ಗೋವಾ ರಾಜ್ಯದ ಸಚಿವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಮಲ್ಪೆ ಬಂದರಿಗೆ ಆಹ್ವಾನ
ಏಷ್ಯಾದಲ್ಲೇ ಅತಿ ದೊಡ್ಡ ಮೀನುಗಾರಿಕಾ ಬಂದರು ಎಂಬ ಖ್ಯಾತಿ ಪಡೆದಿರುವ ಮಲ್ಪೆ ಮೀನುಗಾರಿಕಾ ಬಂದರು ಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾವಿರಾರು ಬೋಟ್ಗಳು ಮೀನುಗಾರಿಕೆ ನಡೆಸುತ್ತಿರುವುದನ್ನು ಉಲ್ಲೇಖಿಸಿ, ಮಹಾರಾಷ್ಟ್ರ ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಮಲ್ಪೆಗೆ ಭೇಟಿ ನೀಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಸಚಿವ ನಿತೇಶ್ ರಾಣೆಗೆ ಆಹ್ವಾನಿಸಿದರು.
ಸಚಿವರ ಭರವಸೆ
ಮನವಿಗೆ ಸ್ಪಂದಿಸಿದ ಸಚಿವ ನಿತೇಶ್ ರಾಣೆ, ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ಸಹಮತ ವ್ಯಕ್ತಪಡಿಸಿ, ಅಂತಾರಾಜ್ಯ ಸಮನ್ವಯ ಸಮಿತಿ ರಚನೆಗೆ ವಿಶೇಷ ಆದ್ಯತೆ ನೀಡುವುದಾಗಿ ತಿಳಿಸಿದರು. ಮಲ್ಪೆ ಬಂದರಿಗೆ ಭೇಟಿ ನೀಡುವ ಇಂಗಿತವೂ ವ್ಯಕ್ತಪಡಿಸಿದರು.
ಈ ವೇಳೆ ಮುಂಬೈ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅರವಿಂದ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಕುಂದರ್, ಕಿಶನ್ ಶೆಟ್ಟಿ ಹಾಗೂ ಅಮಿತ್ ಪೂಜಾರಿ ಉಪಸ್ಥಿತರಿದ್ದರು.

