ಉಡುಪಿ ಜಿಲ್ಲೆಯ ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿಯಲ್ಲಿ ದುಃಖದ ಘಟನೆ ನಡೆದಿದೆ. ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಪವಿತ್ರ (17) ಮತ್ತು ಮಲ್ಲೇಶ (23) ಎಂದು ಗುರುತಿಸಲಾಗಿದೆ. ಇಬ್ಬರೂ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಪವಿತ್ರ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಲ್ಲೇಶ ಕಾಯಕಮಗಾರನಾಗಿದ್ದಾನೆ.
ತಾಯಿ ಕೆಲಸಕ್ಕಿದ್ದು, ಮನೆಯಲ್ಲಿಲ್ಲದ ಸಮಯದಲ್ಲಿ, ಬಾಡಿಗೆ ಜೋಪಡಿಯಲ್ಲಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಐ ಭರತೇಶ್, ಎಎಸ್ಐ ಪರಮೇಶ್ವರ ಕೆ, ಎಎಸ್ಐ ರಮೇಶ್ ಹಾಗೂ ಮುಖ್ಯ ಆರಕ್ಷಕ ಜಯಕರ ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದ್ದಾರೆ.
ಸಮಾಜಸೇವಕ ನಿತ್ಯಾನಂದ ಒಳಕಾಡು ಮೃತದೇಹಗಳನ್ನು ನೇಣಿನಿಂದ ಇಳಿಸಿ, ಅಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು.
ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣವನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.





