ಮಂಗಳೂರು : ತುಳು ಕೂಟದ ಅಧ್ಯಕ್ಷರಾಗಿ, ಸಾಮಾಜಿಕ, ರಾಜಕೀಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಸುಂದರರಾಜ್ ರೈ ಅವರು ರಾಜಧಾನಿಯಲ್ಲಿ ತುಳುವರ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುವುದರ ಮೂಲಕ ಸಮಾಜಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಸಮಾಜಮುಖಿ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಇತ್ತೀಚಿಗೆ ನಿಧನರಾದ ಕೆ.ಸುಂದರರಾಜ್ ರೈ ಅವರಿಗೆ ಮಂಗಳೂರಿನ ತುಳುಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.
ಸುಂದರರಾಜ್ ರೈ ಅವರ ಆಶಯಗಳನ್ನು ಮುಂದುವರಿಸುವ ಮೂಲಕ ಅವರಿಗೆ ಗೌರವ ಅರ್ಪಣೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರ ಮಾತನಾಡಿ , ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಸುಂದರರಾಜ್ ರೈ ಅವರು ಬೆಂಗಳೂರಿನಲ್ಲಿ ನೆಲೆಯಾಗಿ ತುಳು ಸಂಘಟನೆ , ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ಅಪಾರವಾದ ಜನಪ್ರಿಯತೆಯನ್ನು ಪಡೆದಿದ್ದರೂ, ತನ್ನ ವೈಯುಕ್ತಿಕ ಲಾಭ ಉದ್ದೇಶಕ್ಕಾಗಿ ಏನನ್ನು ಮಾಡದೆ ಸರ್ವಸ್ವವೂ ಸಮಾಜಕ್ಕಾಗಿ ಎಂಬ ರೀತಿಯಲ್ಲಿ ಸೇವೆ ಸಲ್ಲಿಸಿದವರು. ಅವರ ಕುಟುಂಬಕ್ಕೆ ನಾವೆಲ್ಲರೂ ಆಸರೆಯಾಗಿ ನಿಲ್ಲಬೇಕೆಂದು ಹೇಳಿದರು.
ಹಿರಿಯ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ , ತುಳುನಾಡಿನ ಎಲ್ಲಾ ನಾಟಕ ಕಲಾ ತಂಡದವರಿಗೆ ಬೆಂಗಳೂರಿನ ಪ್ರೋತ್ಸಾಹ, ಬೆಂಬಲವಾಗಿ ಸುಂದರರಾಜ್ ರೈ ಅವರು ಸದಾ ಇರುತ್ತಿದ್ದರು ಎಂದು ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಮಾತನಾಡಿ, ಜನಜಾಗೃತಿ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷರಾಗಿ, ತುಳುಕೂಟದ ಅಧ್ಯಕ್ಷರಾಗಿ ಸುಂದರರಾಜ್ ಅವರು ಸಮಾಜಮುಖಿಯಾಗಿ ಕೆಲಸ ಮಾಡಿದವರು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ, ರಾಮಚಂದ್ರ ಬೈಕಂಪಾಡಿ, ರಾಜಗೋಪಾಲ್ ರೈ, ಯೋಗೀಶ್ ಶೆಟ್ಟಿ ಜೆಪ್ಪು, ಲಕುಮಿ ಕಿಶೋರ್ ಕುಮಾರ್ ಶೆಟ್ಟಿ, ಬಜಿಲಕೇರಿ ಕಮಲಾಕ್ಷ, ಆನಂದ ಶೆಟ್ಟಿ, ಸಂಜಯ್ ಕುಮಾರ್ ಶೆಟ್ಟಿ ಗೋಣಿ ಬೀಡು , ರವಿ ಅಲೆವೂರಾಯ, ಸುಂದರ್ ರಾಜ್ ಅವರ ಸಹೋದರ ರಮೇಶ್ ರೈ, ರಮೇಶ್ ಮಂಚಕಲ್, ಡಾ.ಮೀನಾಕ್ಷಿ ರಾಮಚಂದ್ರ, ಕುಶಲಾಕ್ಷಿ ಕಣ್ವತೀರ್ಥ, ವಿಜಯಲಕ್ಷ್ಮಿ ಶೆಟ್ಟಿ ,ಪಿ.ಎ.ಪೂಜಾರಿ, ಮುರಳಿ ಹೊಸಮಜಲು ಮೊದಲಾದವರು ಭಾಗವಹಿಸಿದ್ದರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನುಡಿ ನಮನ ಕಾರ್ಯಕ್ರಮ ನಡೆಸಿಕೊಟ್ಟರು.


