ಮಂಗಳೂರು: ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ಸಂಪರ್ಕ ಸೇತುವೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲೇ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ Dinesh Gundu Rao ತಿಳಿಸಿದ್ದಾರೆ.

ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಸೇತುವೆಯ ಗರ್ಡರ್ ಲಾಂಚಿಂಗ್ ಕಾರ್ಯ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ನಂತರ ಗುರುಪುರ ನದಿಯಲ್ಲಿ ಬೋಟ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸುಮಾರು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಹು ನಿರೀಕ್ಷಿತ ಸೇತುವೆ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದೆ. ಇದರಿಂದ ಪ್ರಯಾಣದ ಅವಧಿ ಸುಮಾರು ಅರ್ಧ ಗಂಟೆಯಷ್ಟು ಕಡಿಮೆಯಾಗಲಿದ್ದು, ವಿಶೇಷವಾಗಿ ಬೆಂಗ್ರೆ ಭಾಗದ ಸಾವಿರಾರು ಕುಟುಂಬಗಳಿಗೆ ನೇರ ಪ್ರಯೋಜನವಾಗಲಿದೆ ಎಂದು ಸಚಿವರು ತಿಳಿಸಿದರು.
ರಾಷ್ಟ್ರೀಯ ಮಟ್ಟದ ಮಾರ್ಗಸೂಚಿಗಳನ್ನು ಅನುಸರಿಸಿ ಬೋಟ್ ಸಂಚಾರಕ್ಕೆ ಅಡ್ಡಿಯಾಗದಂತೆ ಸೇತುವೆಯನ್ನು ಸೂಕ್ತ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಕಾರು, ಬಸ್, ಸರಕು ವಾಹನ ಸೇರಿದಂತೆ ಎಲ್ಲಾ ವಿಧದ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಇದೇ ವೇಳೆ, ಬ್ಲೂ ಫ್ಲ್ಯಾಗ್ ಬೀಚ್ ರಸ್ತೆ ಸಂಪರ್ಕ, ಪ್ರವಾಸೋದ್ಯಮ ವೃದ್ಧಿ ಹಾಗೂ ಕರಾವಳಿ ಪ್ರದೇಶದ ಸಂಚಾರ ವ್ಯವಸ್ಥೆಗೆ ಈ ಸೇತುವೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸವನ್ನೂ ಸಚಿವರು ವ್ಯಕ್ತಪಡಿಸಿದರು.




