ಮೂಡಬಿದ್ರೆ,:
ಸಂಕುಚಿತ ಮನೋಭಾವಗಳಿಂದ ಸಮಾಜ ವಿಭಜನೆಯ ಅಂಚಿನತ್ತ ಸಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಸಮಗ್ರತೆ, ಸಹಭಾಗಿತ್ವ ಮತ್ತು ಧಾರ್ಮಿಕ ಮೌಲ್ಯಗಳ ಅಳವಡಿಕೆ ಅತ್ಯಂತ ಅಗತ್ಯವೆಂದು ಸ್ವಸ್ತಿ ಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಮೂಡಬಿದ್ರೆಯ ಶ್ರೀ ಮಹಾವೀರ ಭವನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ತೌಳವ ಇಂದ್ರ ಸಮಾಜದ ಆಶ್ರಯದಲ್ಲಿ ನಡೆದ ಇಂದ್ರ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ ಜೈನ ಸಮಾಜದ ಮಕ್ಕಳಿಗೆ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ತೌಳವ ಇಂದ್ರ ಸಮಾಜವು ಯಾವುದೇ ಭೇದಭಾವವಿಲ್ಲದೆ ಜೈನ ಬಾಲಕ–ಬಾಲಕಿಯರನ್ನು ಒಟ್ಟುಗೂಡಿಸಿ ಧರ್ಮಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಂಸ್ಕಾರಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಜೈನ ಸಮಾಜದ ಏಳಿಗೆಗೆ ಇದು ಹೊಸ ನಾಂದಿ ಆಗಬೇಕು. ಜೈನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಇಂತಹ ಸಂಘಟಿತ ಪ್ರಯತ್ನಗಳು ಅವಶ್ಯಕವೆಂದು ಶ್ರೀಗಳು ತಿಳಿಸಿದರು.
ವಟುಗಳಿಗೆ ಧರ್ಮೋಪದೇಶ ನೀಡಿದ ಅವರು, ಜೈನ ಆಚಾರ್ಯರು ನಿರೂಪಿಸಿದ ನಾಲ್ಕು ಅನುಯೋಗಗಳಲ್ಲಿ ಚರಣಾನುಯೋಗದಲ್ಲಿ ಉಲ್ಲೇಖಿಸಲಾದ ತತ್ತ್ವಗಳನ್ನು ಶ್ರಾವಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ ಎಂದರು. ಪಂಚಾನು ವ್ರತಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದರಿಂದ ಆಧ್ಯಾತ್ಮಿಕ ಉನ್ನತಿ ಸಾಧ್ಯ. ಮೋಕ್ಷದ ದಾರಿ ಎಲ್ಲರಿಗೂ ಮುಕ್ತವಾಗಿದೆ ಎಂಬ ಸಂದೇಶವನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಏಳು ವಟುಗಳಿಗೆ ಉಪನಯನ ಸಂಸ್ಕಾರ ನೆರವೇರಿಸಲಾಯಿತು ಹಾಗೂ 25 ಜೈನ ಬಾಲಕ–ಬಾಲಕಿಯರಿಗೆ ವೃತೋಪದೇಶ ನೀಡಲಾಯಿತು. ತೌಳವ ಇಂದ್ರ ಸಮಾಜದ ಅಧ್ಯಕ್ಷ ಧರಣೇಂದ್ರ ಇಂದ್ರ ಪಾಣೇರು ಹಾಗೂ ಕಾರ್ಯದರ್ಶಿ ಶ್ರೀ ವೃಷಭರಾಜ ಇಂದ್ರ ಅಜ್ಜಿಬೆಟ್ಟು ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಂದ್ರರು ಹಾಗೂ ಜೈನ ಶ್ರಾವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ದಾನಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪ್ರಮೋದ್ ಕುಮಾರ್ ಉಜಿರೆ ನಿರ್ವಹಿಸಿ ಧನ್ಯವಾದ ಸಲ್ಲಿಸಿದರು.





