ನವದೆಹಲಿ, ಅ.1: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸ್ಥಾಪನೆಯ 100ನೇ ವರ್ಷಾಚರಣೆಯ ಅಂಗವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ವಿಶೇಷವಾಗಿ ವಿನ್ಯಾಸಗೊಳಿಸಲಾದ ₹100 ಮುಖಬೆಲೆಯ ನಾಣ್ಯ ಮತ್ತು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಈ ನಾಣ್ಯದಲ್ಲಿ ಒಂದು ಬದಿಯಲ್ಲಿ ಭಾರತ ಸರ್ಕಾರದ ಲಾಂಛನ ಹಾಗೂ ‘ಸತ್ಯಮೇವ ಜಯತೆ’ ಮುದ್ರೆಯೊಂದಿಗೆ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ. ಇನ್ನೊಂದು ಬದಿಯಲ್ಲಿ, ಆಕೆಯ ಮುಂದೆ ನಮಸ್ಕಾರ ಸಲ್ಲಿಸುತ್ತಿರುವ ಸ್ವಯಂಸೇವಕರ ಚಿತ್ರವಿದೆ. “ಭಾರತೀಯ ಕರೆನ್ಸಿಯಲ್ಲಿ ಭಾರತ ಮಾತೆಯ ಚಿತ್ರಣ ಇದೇ ಮೊದಲು ಕಾಣಿಸಿಕೊಂಡಿದೆ,” ಎಂದು ಮೋದಿ ಅವರು ವಿವರಿಸಿದರು.

ಅಂಚೆ ಚೀಟಿಯಲ್ಲಿ 1963ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಆರ್ಎಸ್ಎಸ್ ಸ್ವಯಂಸೇವಕರ ಐತಿಹಾಸಿಕ ದೃಶ್ಯವನ್ನು ಅಳವಡಿಸಲಾಗಿದೆ, ಇದು ಸಂಸ್ಥೆಯ ರಾಷ್ಟ್ರಪರ ಸೇವಾ ಇತಿಹಾಸವನ್ನು ಸ್ಮರಿಸುತ್ತದೆ.

ಶತಮಾನೋತ್ಸವ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ, “ಆರ್ಎಸ್ಎಸ್ ನ ಹಾದಿಯಲ್ಲಿ ನೂರಾರು ಜೀವಗಳು ಅರಳಿವೆ. ಇದು ನದಿಯ ದಡದಲ್ಲಿ ಬೆಳೆಯುವ ನಾಗರಿಕತೆಗಳಂತೆ, ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದೆ,” ಎಂದು ಹೇಳಿದರು.

ಅಲ್ಲದೇ, ಸಂಘದ ಸ್ಥಾಪನೆಯ ದಿನವಾದ ವಿಜಯದಶಮಿಯ ಮಹತ್ವವನ್ನು ಉಲ್ಲೇಖಿಸಿದ ಅವರು, “ವಿಜಯದಶಮಿಯು ಕೆಟ್ಟದರ ಮೇಲೆ ಒಳ್ಳೆಯದಿನ ವಿಜಯದ ಸಂಕೇತ. ಈ ದಿನ ಸಂಘದ ಆಧಾರಶಿಲೆ ಬಿದ್ದಿದ್ದು, ಅದು ಸತ್ಯ, ಧರ್ಮ ಮತ್ತು ಸೇವೆಯ ಪಥವನ್ನು ಅನುಸರಿಸಿದೆ,” ಎಂದು ಹೇಳಿದರು.
ಡಾ. ಹೆಡ್ಗೆವಾರ್ ಅವರಿಗೆ ಗೌರವ:
ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಸೇವೆಯನ್ನು ಸ್ಮರಿಸಿದ ಪ್ರಧಾನಿ, “ಅವರ ಪಾದಗಳಿಗೆ ನನ್ನ ವಿನಮ್ರ ನಮನಗಳು,” ಎಂದರು. ದೇಶದ ಸೇವೆಗೆ ನಿಸ್ವಾರ್ಥವಾಗಿ ತೊಡಗಿರುವ ಲಕ್ಷಾಂತರ ಸ್ವಯಂಸೇವಕರನ್ನು ಅವರು ಅಭಿನಂದಿಸಿದರು.

