ಮಂಗಳೂರು, ಜೂನ್ 10: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳೊಂದಿಗೆ ಪರಿಣಾಮಕಾರಿ ಸಂವಹನ ನಡೆಸುವ ಉದ್ದೇಶದಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡುವ ಕ್ರಮಕ್ಕೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ವಿದ್ಯಾರ್ಥಿಗಳು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ ಎಂದು ಕೆಎಂಸಿ ಡೀನ್ ಡಾ. ಬಿ. ಉಣ್ಣಿಕೃಷ್ಣನ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ರೋಗಿಗಳು ವೆನ್ಲಾಕ್ ಆಸ್ಪತ್ರೆಗೆ ಆಗಮಿಸುತ್ತಾರೆ. ಅವರಲ್ಲಿ ಹೆಚ್ಚಿನವರು ಕನ್ನಡ ಭಾಷೆಯನ್ನೇ ಮಾತನಾಡುವವರಾಗಿದ್ದು, ಕೆಲ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಇಂಟರ್ನ್ಗಳು ಕನ್ನಡದಲ್ಲಿ ಸಂವಹನ ನಡೆಸದ ಕಾರಣ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಇತ್ತೀಚೆಗೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆ ಜಿಲ್ಲಾ ವೈದ್ಯಾಧಿಕಾರಿ (DMO) ಡಾ.ಶಿವಪ್ರಕಾಶ್ ರವರು ರೋಗಿಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವಂತೆ ಸೂಚನೆ ನೀಡಿದ್ದು, ಹೊರರಾಜ್ಯಗಳಿಂದ ಆಗಮಿಸುವ ವೈದ್ಯಕೀಯ ವಿದ್ಯಾರ್ಥಿಗಳು ಮೂರು ತಿಂಗಳೊಳಗೆ ಕನ್ನಡ ಕಲಿಯಬೇಕು ಎಂದು ನಿರ್ದೇಶನ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಾ. ಬಿ. ಉಣ್ಣಿಕೃಷ್ಣನ್, “ವೈದ್ಯಕೀಯ ಕ್ಷೇತ್ರದಲ್ಲಿ ರೋಗಿ ಮತ್ತು ವೈದ್ಯರ ನಡುವಿನ ಸಂವಹನ ಅತ್ಯಂತ ಪ್ರಮುಖವಾಗಿದೆ. ರೋಗಿಯ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹಾಗೂ ಚಿಕಿತ್ಸೆಯ ವಿವರಗಳನ್ನು ಪರಿಣಾಮಕಾರಿಯಾಗಿ ತಿಳಿಸಲು ಸ್ಥಳೀಯ ಭಾಷೆಯ ಜ್ಞಾನ ಅಗತ್ಯವಾಗಿದೆ. ಕನ್ನಡ ತಿಳಿಯದಿದ್ದರೆ ಆಸ್ಪತ್ರೆಯಲ್ಲಿ ಪ್ರಕರಣಗಳ ನಿರ್ವಹಣೆ ಕಷ್ಟವಾಗುತ್ತದೆ,” ಎಂದು ಹೇಳಿದರು.
ಕೆಎಂಸಿಯಲ್ಲಿ ಕಳೆದ 10 ರಿಂದ 15 ವರ್ಷಗಳಿಂದಲೇ ಕನ್ನಡ ತರಬೇತಿಯನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಲಾಗಿದೆ. ಕಾಲೇಜಿನಲ್ಲಿ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದರೂ, ಮೊದಲ ವರ್ಷದಂದೇ ಅವರಿಗೆ ವಿಶೇಷ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿದೆ. ಮಾತನಾಡುವ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮೂಲಭೂತ ಬರವಣಿಗೆ ಕೌಶಲ್ಯಗಳನ್ನೂ ಕಲಿಸಲಾಗುತ್ತಿದೆ.
ಕಾಲೇಜಿನಲ್ಲಿ ಕನ್ನಡ ಬೋಧಕರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಂಗ್ಲಿಷ್–ಕನ್ನಡ ಕಲಿಕಾ ಪುಸ್ತಕಗಳನ್ನೂ ಒದಗಿಸಲಾಗಿದೆ. ಅಲ್ಲದೆ, ಕನ್ನಡ ದಿವಸ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೂ ವಿದ್ಯಾರ್ಥಿಗಳಲ್ಲಿ ಭಾಷೆಯ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ.
ಪ್ರಸ್ತುತ ಕೆಎಂಸಿಯ ಸುಮಾರು 90 ರಿಂದ 95 ಶೇಕಡಾ ಅಧ್ಯಾಪಕರು ಕನ್ನಡ ಮಾತನಾಡುವವರಾಗಿದ್ದು, ವಿದ್ಯಾರ್ಥಿಗಳಿಗೆ ಭಾಷೆ ಕಲಿಯಲು ಅಗತ್ಯ ಸಹಕಾರ ನೀಡುತ್ತಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಬಹುತೇಕ ವೈದ್ಯರು ಮತ್ತು ತಜ್ಞರು ಕರ್ನಾಟಕದವರಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯಲು ಇನ್ನಷ್ಟು ಅನುಕೂಲಕರ ವಾತಾವರಣ ದೊರೆಯುತ್ತಿದೆ.
ರೋಗಿಗಳೊಂದಿಗೆ ಉತ್ತಮ ಸಂವಹನ, ಚಿಕಿತ್ಸೆಯ ಬಗ್ಗೆ ಸ್ಪಷ್ಟ ಮಾಹಿತಿ ಮತ್ತು ಮಾನವೀಯ ಸೇವೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯ ಬಳಕೆಗೆ ನೀಡಲಾಗುತ್ತಿರುವ ಮಹತ್ವವನ್ನು ವೈದ್ಯಕೀಯ ವಿದ್ಯಾರ್ಥಿಗಳು ಸ್ವಾಗತಿಸಿರುವುದು ಗಮನಾರ್ಹವಾಗಿದೆ.









