ಪುತ್ತೂರು: “ನನ್ನ ಮಗಳಿಗೆ ನ್ಯಾಯ ದೊರೆಯದಿದ್ದರೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತೇನೆ” ಎಂದು ಸಂತ್ರಸ್ತೆಯ ತಾಯಿ ನಮಿತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದಿದ್ದು ಒಂದು ವರ್ಷ ಕಳೆದರೂ ನ್ಯಾಯ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಿ.ಜಿ. ಜಗನ್ನಿವಾಸ್ ರಾವ್ ಇಂದಿಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದನ್ನು ಪ್ರಶ್ನಿಸಿದ ಅವರು, “ನನ್ನ ಮಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಮತ್ತಷ್ಟು ವಿವರಿಸಿದ ಅವರು, “ತಮ್ಮ ಮಗ ಕೃಷ್ಣ ಜೆ. ರಾವ್ ಮತ್ತು ಸಂತ್ರಸ್ತೆಯ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ಮುಚ್ಚಳಿಕೆ ಪತ್ರವನ್ನೂ ಬರೆದು ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ ಒಂಬತ್ತು ತಿಂಗಳವರೆಗೆ ನಮ್ಮನ್ನು ದಾರಿ ತಪ್ಪಿಸಿ, ಈಗ ಮಗುವಿಗೆ 10 ತಿಂಗಳು ಆದರೂ ಮದುವೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಮುಂದುವರೆದು, “ಇಲ್ಲಿವರೆಗೆ ಅವರ ಧಾರ್ಮಿಕ ಸೇವೆಗಳ ಬಗ್ಗೆ ಮೌನವಾಗಿದ್ದೇವೆ. ಆದರೆ ಇನ್ನು ಮುಂದೆ ಅವರನ್ನು ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬಾರದು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಅವರು ದೇವಸ್ಥಾನದ ವಿವಿಧ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿರುವುದನ್ನು ಉಲ್ಲೇಖಿಸಿದ ನಮಿತಾ, ಜಾತ್ರೋತ್ಸವದ ಗೊಣೆ ಮುಹೂರ್ತದಲ್ಲೂ ಅವರ ಸಕ್ರಿಯತೆ ಬಗ್ಗೆ ಪ್ರಶ್ನೆ ಎತ್ತಿದರು.
ಈ ಹಿನ್ನೆಲೆಯಲ್ಲಿ, ಏಪ್ರಿಲ್ 10ರಂದು ನಡೆಯಲಿರುವ ಜಾತ್ರೋತ್ಸವದ ಧ್ವಜಾರೋಹಣದ ದಿನ, ದೇವಸ್ಥಾನದ ಧ್ವಜಸ್ತಂಭದ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು. “ತಂತ್ರಿಯವರಲ್ಲಿ ನ್ಯಾಯಕ್ಕಾಗಿ ಮನವಿ ಮಾಡುತ್ತೇನೆ. ದೇವರಲ್ಲದೇ ಇನ್ನು ಯಾರಿಂದಲೂ ನ್ಯಾಯ ಸಿಗುವ ನಿರೀಕ್ಷೆ ಇಲ್ಲ” ಎಂದು ಅವರು ಹೇಳಿದರು.
“ಹಲವರ ಬಳಿ ಹೋಗಿ ಮದುವೆ ಮಾಡಿಸಿಕೊಡಿ ಎಂದು ಕೇಳಿದ್ದೇನೆ. ಆದರೆ ಯಾರ ಮನಸ್ಸು ಕರಗಿಲ್ಲ. ಜಗನ್ನಿವಾಸ್ ರಾವ್ ಅವರು ಮದುವೆ ಮಾಡಿಸುತ್ತೇನೆಂದು ಹೇಳಿ ಈಗ ತಮ್ಮ ಮಗನನ್ನೇ ರಕ್ಷಿಸುತ್ತಿದ್ದಾರೆ. ಮೊದಲು ನನ್ನ ಮಗಳಿಗೆ ನ್ಯಾಯ ಸಿಗಬೇಕು” ಎಂದು ಅವರು ಒತ್ತಾಯಿಸಿದರು.
ಒಟ್ಟಿನಲ್ಲಿ, ಪ್ರಕರಣಕ್ಕೆ ನ್ಯಾಯ ಸಿಗದಿದ್ದರೆ ಧಾರ್ಮಿಕ ಕೇಂದ್ರದ ಎದುರಲ್ಲೇ ಹೋರಾಟಕ್ಕೆ ಮುಂದಾಗುವ ನಿರ್ಧಾರವನ್ನು ಸಂತ್ರಸ್ತೆಯ ತಾಯಿ ಘೋಷಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಕಾಣಿಸುತ್ತಿದೆ.
