ಪುತ್ತೂರು (ದಕ್ಷಿಣ ಕನ್ನಡ):
ಈಶ್ವರಮಂಗಳದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಷರ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ದಾಳಿ ಮಾಡಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಗುಂಡೇಟಿಗೆ ಒಳಗಾದ ಆರೋಪಿ ಕಾಸರಗೋಡು ಮೂಲದ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಅವನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ಅಬ್ದುಲ್ಲಾ ಐಷರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದಾನೆ. ಪೊಲೀಸರು ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಸುಮಾರು 10 ಕಿ.ಮೀ.ವರೆಗೆ ನಡೆದ ಚೇಸ್ ವೇಳೆ, ಆರೋಪಿಯು ಪೊಲೀಸರ ಜೀಪಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಪಿಎಸ್ಐ ಅವರು ಆತ್ಮರಕ್ಷಣೆಗೆ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ವಾಹನಕ್ಕೆ ತಗುಲಿದ್ದು, ಮತ್ತೊಂದು ಅಬ್ದುಲ್ಲಾ ಕಾಲಿಗೆ ತಗುಲಿದೆ. ಗುಂಡೇಟಿನ ಬಳಿಕ ವಾಹನ ನಿಂತಾಗ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರೋಪಿ ಅಬ್ದುಲ್ಲಾ ವಿರುದ್ಧ ಇದೇ ಮೊದಲೇ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದದು ತಿಳಿದುಬಂದಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.


