ಮಂಗಳೂರು, ಜೂನ್ 17: ಜಪ್ಪಿನಮೊಗರು ಕಡೆಕಾರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಕ್ಕೆ ಬುಧವಾರ ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ವೈಭವದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ವೈದಿಕ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಭಕ್ತರ ಸಮೃದ್ಧಿಗಾಗಿ ಶುಭ ಹಾರೈಸಿದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿಪ್ರಸಾದ್ ಜೆ. ಮಾತನಾಡಿ, ಸುಮಾರು 680 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಮಲ್ಲಿಕಾರ್ಜುನ ಕ್ಷೇತ್ರವನ್ನು ಐದು ಅಡಿ ಎತ್ತರಿಸಿ ಪುನರ್ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಭಕ್ತರ ಸಹಕಾರ ಮತ್ತು ದಾನಿಗಳ ನೆರವಿನಿಂದ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಂಕಲ್ಪ ಹೊಂದಿರುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರಷ್ಣ ಪಾಲೆಮಾರ್, ವೀಣಾಮಂಗಳ, ಶಿವಾನಂದ ರಾವ್, ಜೆ. ಜಗದೀಶ್ ರಾವ್, ಜೆ. ಕೊರಗಪ್ಪ, ರಾಧಾಕೃಷ್ಣ, ನವೀನ್ಚಂದ್ರ, ಸುಧೀರ್, ಸಂತೋಷ್, ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್, ಜೆ.ಕೆ. ರಾವ್, ಯೋಗಿಶ್ ಕುಮಾರ್ ಜಪ್ಪು , ವೆಂಕಟೇಶ್ ಸೇರಿದಂತೆ ಹಲವಾರು ಗಣ್ಯರು, ಭಕ್ತರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಕ್ಷೇತ್ರದ ಪುನರ್ನಿರ್ಮಾಣ ಕಾರ್ಯವು ಭವಿಷ್ಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲಿದ್ದು, ಭಕ್ತ ಸಮುದಾಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.




