ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮಗು ಮಾರಾಟ ಪ್ರಕರಣವೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಅಂಗನವಾಡಿ ಸಿಬ್ಬಂದಿಯ ಶಂಕೆಯಿಂದ ಆರಂಭವಾದ ಈ ಪ್ರಕರಣ ಇದೀಗ ಮೂವರು ಆರೋಪಿಗಳ ಬಂಧನಕ್ಕೆ ದಾರಿ ನೀಡಿದ್ದು, ಶಿಶುವಿನ ಹಕ್ಕು ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿಸಿವೆ.
ಬಂಧಿತ ಆರೋಪಿಗಳನ್ನು ಡಾ. ಸೋಮೇಶ್ ಸೊಲೊಮನ್, ವಿಜಯಲಕ್ಷ್ಮಿ ಯಾನೆ ವಿಜಯ, ಹಾಗೂ ನವನೀತ್ ನಾರಾಯಣ ಎಂದು ಪೊಲೀಸರು ಗುರುತಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಶಯದಿಂದ ಆರಂಭವಾದ ತನಿಖೆ
ಹೇರೂರು ಗ್ರಾಮದ ಕಲ್ಲುಗುಡ್ಡೆಯ ಪ್ರಭಾವತಿ ಮತ್ತು ಅವರ ಪತಿ ರಮೇಶ್ ಮೂಲ್ಯ ದಂಪತಿಗಳು, 4 ದಿನದ ಶಿಶುವನ್ನು ಪೋಷಣ್ ಟ್ರ್ಯಾಕರ್ನಲ್ಲಿ ನೋಂದಾಯಿಸಲು ಅಂಗನವಾಡಿಗೆ ಕರೆದುಕೊಂಡು ಹೋಗಿದ್ದರು. ಮಗು ದಂಪತಿಗಳ ಶಿಶುವಲ್ಲ ಎಂಬ ಸಂಶಯ ಅಂಗನವಾಡಿ ಕಾರ್ಯಕರ್ತೆಗೆ ಉಂಟಾಗಿ, ಮಾಹಿತಿ ಶಿರ್ವ ಪೊಲೀಸ್ ಠಾಣೆಗೆ ತಲುಪಿಸಲಾಯಿತು.
ಪೊಲೀಸರು ಪ್ರಭಾವತಿಯವರ ಮನೆಯ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದಾಗ, ಅ.03 ರಂದು ಮಂಗಳೂರಿನ ಕೊಲಾಸೊ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಹಣದ ನೀಡಿ ಪಡೆದುಕೊಂಡಿರುವುದಾಗಿ ಪ್ರಭಾವತಿ ಒಪ್ಪಿಕೊಂಡಿದ್ದಾರೆ. ಈ ಮಗು ಪ್ರಭಾವತಿಯ ಚಿಕ್ಕಮ್ಮನ ಮಗಳು ಪ್ರಿಯಾಂಕ ಅವರಿಗೆ ಸಂಬಂಧಪಟ್ಟವಳಾಗಿದ್ದು, ಆಸ್ಪತ್ರೆಯ ವೈದ್ಯರ ಸಹಕಾರದಿಂದ 4.5 ಲಕ್ಷ ರೂ. ನೀಡಿ ಮಗುವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ
