ಕುಂದಾಪುರ, ಮಾ.1: ಹೊಸಂಗಡಿಯ ಭಾಗಿಮನೆ ಸಮೀಪ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಭವಿಸಿದೆ.
ಮೃತರನ್ನು ಶುಭಶ್ರೀ ಕಾರಂತ್ (53) ಎಂದು ಗುರುತಿಸಲಾಗಿದೆ. ಅವರು ಸ್ಥಳೀಯವಾಗಿ ಪರಿಚಿತ ಉದ್ಯಮಿಯಾಗಿದ್ದರು ಎಂದು ತಿಳಿದು ಬಂದಿದೆ.
ಮಾಹಿತಿ ಪ್ರಕಾರ, ಕುಂದಾಪುರದಿಂದ ಸುಮಾರು 8–10 ಜನರ ತಂಡ ರವಿವಾರ ಬೆಳಗ್ಗೆ ಹೊಸಂಗಡಿಯ ಮೆಟ್ಕಲ್ ಗುಡ್ಡ ಪ್ರದೇಶಕ್ಕೆ ಟ್ರೆಕ್ಕಿಂಗ್ಗೆ ತೆರಳಿತ್ತು. ಟ್ರೆಕ್ಕಿಂಗ್ ಮುಗಿದ ಬಳಿಕ ಸಮೀಪದ ನದಿಯ ಬಳಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈಜಲು ನದಿಗೆ ಇಳಿದ ವೇಳೆ ಅಥವಾ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತಂಡದ ಸದಸ್ಯರು ತಕ್ಷಣ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರೂ, ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



