ಉಡುಪಿ ಜಿಲ್ಲೆಯ ಕೋಡಿ ಬೇಂಗ್ರೇ ಡೆಲ್ಟಾ ಬೀಚ್ನಲ್ಲಿ ಸೋಮವಾರ ಸಂಭವಿಸಿದ ಪ್ರವಾಸಿ ದೋಣಿ ದುರಂತವು ರಾಜ್ಯವನ್ನೇ ಕಲುಷಿತಗೊಳಿಸಿದ್ದು, ಈ ಘಟನೆ ನಮ್ಮೆಲ್ಲರ ಮನಸ್ಸನ್ನು ತೀವ್ರವಾಗಿ ನೋಯಿಸಿದೆ. ಮೈಸೂರಿನಿಂದ ಪ್ರವಾಸಕ್ಕಾಗಿ ಆಗಮಿಸಿದ್ದ ತಂಡದ 14 ಮಂದಿ ದೋಣಿ ವಿಹಾರಕ್ಕೆ ತೆರಳಿದ್ದ ವೇಳೆ, ಹಂಗರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ 15 ರಿಂದ 20 ಪ್ರಯಾಣಿಕರ ಸಾಮರ್ಥ್ಯದ ದೋಣಿ ಮಗುಚಿ ಬಿದ್ದು, ಇಬ್ಬರು ಪ್ರವಾಸಿಗರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದಾರೆ.
ಮೃತರನ್ನು ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27) ಹಾಗೂ ಮೂಗೂರು ಗ್ರಾಮದ ಸಿಂಧು (25) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇನ್ನೂ ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾಗಿದ್ದು, ದೀಶಾ (26) ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ (26) ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಹಾಗೂ ಗಾಯಾಳುಗಳು ಮೈಸೂರಿನ ಸರಸ್ವತಿಪುರಂನಿಂದ ಆಗಮಿಸಿದ ಕಾಲ್ ಸೆಂಟರ್ ಉದ್ಯೋಗಿಗಳ ತಂಡದ ಭಾಗವಾಗಿದ್ದರು.
ದೋಣಿಯಲ್ಲಿ ಒಟ್ಟು 14 ಪ್ರಯಾಣಿಕರಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ದೋಣಿಯಲ್ಲಿದ್ದ ಪ್ರಯಾಣಿಕರಿಗೆ ಲೈಫ್ ಜಾಕೆಟ್ಗಳನ್ನು ನೀಡಲಾಗಿತ್ತು ಎನ್ನಲಾಗಿದ್ದರೂ, ದುರಂತದ ಸಮಯದಲ್ಲಿ ಬಹುತೇಕರು ಅವುಗಳನ್ನು ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬದುಕುಳಿದ ಒಬ್ಬ ಪ್ರಯಾಣಿಕ ಲೈಫ್ ಜಾಕೆಟ್ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೆ ನೀಡಿದ್ದು, ಈ ಬಗ್ಗೆ ಪೊಲೀಸರು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ದೋಣಿ ಮಗುಚಿದ ಕೂಡಲೇ ಎಲ್ಲ 14 ಜನರನ್ನು ಮತ್ತೊಂದು ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಅವರು, “ಇದು ಕೇವಲ ಅಪಘಾತವಲ್ಲ, ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಗಂಭೀರ ನಿರ್ಲಕ್ಷ್ಯ, ನಿಯಮ ಉಲ್ಲಂಘನೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಕೊರತೆಯ ನೇರ ಪರಿಣಾಮ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ತುಳುನಾಡ ರಕ್ಷಣಾ ವೇದಿಕೆಯ ಪರವಾಗಿ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದರು.

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅವರು ಮಾತನಾಡಿ, ಕೋಡಿ ಬೇಂಗ್ರೇ ಸೇರಿದಂತೆ ಜಿಲ್ಲೆಯ ಹಲವೆಡೆ ಪ್ರವಾಸಿ ದೋಣಿಗಳು ಮಾನ್ಯ ಪರವಾನಗಿಗಳಿಲ್ಲದೆ, ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ಪದೇಪದೇ ದೂರು ನೀಡುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಕೆಲವು ದೋಣಿಗಳು ನಕಲಿ ದಾಖಲೆಗಳನ್ನು ಬಳಸಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಗಂಭೀರ ಉಲ್ಲಂಘನೆಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಅವರು ಹೇಳಿದರು.
ಮಲ್ಪೆ ಬೀಚ್ನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹದ ಮೇಲಷ್ಟೇ ಇಲಾಖೆ ಗಮನಹರಿಸಿ, ಸ್ವಚ್ಛತೆ, ಸುರಕ್ಷತಾ ಕ್ರಮಗಳು ಹಾಗೂ ಜೀವರಕ್ಷಕ ಸೌಲಭ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದಕ್ಕೆ ಅವರು ತೀವ್ರ ಟೀಕೆ ವ್ಯಕ್ತಪಡಿಸಿದರು. ಈ ದುರಂತವನ್ನು ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ವಲಯದ ಮೇಲೆ ಬಿದ್ದ ಕಪ್ಪು ಚುಕ್ಕೆ ಎಂದು ಬಣ್ಣಿಸಿದರು.
ತುಳುನಾಡ ರಕ್ಷಣಾ ವೇದಿಕೆ ಈ ಕೆಳಗಿನ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸುತ್ತದೆ:
• ಜಲಕ್ರೀಡೆ ಹಾಗೂ ಬೋಟ್ ಟೂರಿಸಂ ಚಟುವಟಿಕೆಗಳಲ್ಲಿ ಭಾಗವಹಿಸುವ ಎಲ್ಲ ಪ್ರವಾಸಿಗರಿಗೆ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯಗೊಳಿಸಬೇಕು.
• ಪ್ರತಿಯೊಂದು ದೋಣಿಯಲ್ಲೂ ತರಬೇತಿ ಪಡೆದ ಗಾರ್ಡ್ಗಳು ಹಾಗೂ ರಕ್ಷಣಾ ಸಿಬ್ಬಂದಿ ಕಡ್ಡಾಯವಾಗಿ ಇರಬೇಕು.
• ಹವಾಮಾನ, ನೀರಿನ ಮಟ್ಟ, ದೋಣಿಯ ಸಾಮರ್ಥ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸದೇ ಯಾವುದೇ ದೋಣಿಗೆ ಅನುಮತಿ ನೀಡಬಾರದು.
• ಮಾನ್ಯ ಪರವಾನಗಿ ಇಲ್ಲದೆ ಅಥವಾ ನಕಲಿ ದಾಖಲೆಗಳೊಂದಿಗೆ ಕಾರ್ಯನಿರ್ವಹಿಸುವ ದೋಣಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
• ಎಲ್ಲಾ ಜಲಕ್ರೀಡೆ ಕೇಂದ್ರಗಳಲ್ಲಿ ತುರ್ತು ರಕ್ಷಣಾ ವ್ಯವಸ್ಥೆ ಮತ್ತು ನಿರಂತರ ನಿಗಾವ್ಯವಸ್ಥೆ ಜಾರಿಗೊಳಿಸಬೇಕು.
ಪ್ರವಾಸೋದ್ಯಮ ಅಭಿವೃದ್ಧಿ ಅಗತ್ಯವೇ ಸರಿ, ಆದರೆ ಮಾನವ ಜೀವಕ್ಕಿಂತ ಮೌಲ್ಯವಂತಾದದ್ದು ಯಾವುದೂ ಇಲ್ಲ. ನಿಯಮಗಳು ಕಾಗದದಲ್ಲಿ ಮಾತ್ರ ಸೀಮಿತವಾಗದೆ ನೆಲಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಬೇಕಾಗಿದೆ. ಇಂತಹ ನೋವುಂಟುಮಾಡುವ ದುರಂತಗಳು ಮರುಕಳಿಸದಂತೆ ತಕ್ಷಣವೇ ಸಮಗ್ರ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಎಂದು ತುಳುನಾಡ ರಕ್ಷಣಾ ವೇದಿಕೆ ತೀವ್ರವಾಗಿ ಆಗ್ರಹಿಸುತ್ತದೆ.



