ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕನಕದಾಸರ ಎಲ್ಲಾ ಕೃತಿಗಳನ್ನು ದೇಶದ 14 ಭಾಷೆಗಳಲ್ಲಿ ಅನುವಾದ ಮಾಡುವ ಕಾರ್ಯ ಕೈಗೊಂಡು ಅದೀಗ ತಲಾ ಮೂರು ಸಂಪುಟಗಳಲ್ಲಿ ಅಚ್ಚಾಗಿ ಬಿಡುಗಡೆಗೆ ಸಿದ್ಧವಾಗಿವೆ.
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 14 ಭಾಷೆಗಳಲ್ಲಿ ಅನುವಾದವಾಗಿ ಸಿದ್ಧವಾದ ಸಂಪುಟಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು. ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಕೃತಿಗಳ ಕುರಿತು ಮಾತನಾಡುವರು.
ಮೂರು ಸಂಪುಟಗಳಲ್ಲಿ ತುಳು ಆವೃತ್ತಿ:
ಕರಾವಳಿ ಕರ್ನಾಟಕದ ಪ್ರಮುಖ ಆಡುಭಾಷೆಯಾಗಿರುವ ತುಳುವಿನಲ್ಲಿ ಕನಕದಾಸರ ಸಮಗ್ರ ಕೃತಿಗಳು ಅನುವಾದವಾಗಿದ್ದು ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ| ಎ.ವಿ. ನಾವಡ ತುಳು ಆವೃತ್ತಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿ ಹಿರಿಯ ಲೇಖಕರು ಆ ಕೃತಿಗಳನ್ನು ತುಳು ಭಾಷೆಗೆ ಅನುವಾದಿಸಿದ್ದಾರೆ.

ದಿ| ಡಾ.ವಾಮನ ನಂದಾವರ, ಡಾ. ವಸಂತ ಕುಮಾರ್ ಪೆರ್ಲ (ಮೋಹನ ತರಂಗಿಣಿ); ಡಾ. ವಸಂತ ಭಾರದ್ವಾಜ, ಪ್ರೊ.ಟಿ ಎ ಎನ್ ಖಂಡಿಗೆ (ಕೀರ್ತನೆಲು, ಮುಂಡಿಗೆಲು); ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಆತ್ರಾಡಿ ಅಮೃತ ಶೆಟ್ಟಿ (ನಳ ಚರಿತ್ರೆ); ಮುದ್ದು ಮೂಡುಬೆಳ್ಳೆ (ರಾಮಧಾನ್ಯ ಚರಿತ್ರೆ); ಡಾ. ಕಾತ್ಯಾಯಿನಿ ಕುಂಜಿಬೆಟ್ಟು (ಹರಿಭಕ್ತಿಸಾರ) ಇವರು ಕನಕದಾಸರ ಸಮಗ್ರ ಕೃತಿಗಳನ್ನು ಅನುವಾದಿಸಿದ ವಿದ್ವಾಂಸರು.

ಮೇ 15ರಂದು ಬಿಡುಗಡೆ:
ಇದೇ 2026 ಮೇ 15ರಂದು ಶುಕ್ರವಾರ ಸಂಜೆ ಗಂಟೆ 5:30ಕ್ಕೆ ಬೆಂಗಳೂರಿನ ಮಲ್ಲತಹಳ್ಳಿ ಸಾಂಸ್ಕೃತಿಕ ಸಮುಚ್ಚಯ ಕಲಾಗ್ರಾಮದಲ್ಲಿ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಸಂಪುಟಗಳ ಬಿಡುಗಡೆ ಮತ್ತು ಕನಕ ಶಿಲ್ಪವನ ಅನಾವರಣ ನಡೆಯಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯೋಜನೆಯ ಎಲ್ಲಾ ಅನುವಾದಕರಿಗೆ ಗೌರವ ಪ್ರತಿಗಳನ್ನು ನೀಡಿ ಅಭಿನಂದಿಸಲಿದ್ದಾರೆ ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.

