ಮಂಗಳೂರು, ಜೂನ್ 20: ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಗಳ ವ್ಯಾಪ್ತಿಯಲ್ಲಿರುವ ಫಲವತ್ತಾದ ಕೃಷಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿ, ಜನತಾದಳ (ಜಾತ್ಯತೀತ) ಪಕ್ಷದ ನಿಯೋಗವು ಜಿಲ್ಲಾದ್ಯಕ್ಷರಾದ ಜಾಕೆ ಮಾಧವ ಗೌಡರವರ ಮಾರ್ಗದರ್ಶನದಲ್ಲಿ ದಿನಾಂಕ 20-06-2026ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ, ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಭೂಸ್ವಾಧೀನ ಯೋಜನೆಯು ರೈತ ವಿರೋಧಿ ನೀತಿಯಾಗಿದ್ದು, ಇದರಿಂದ ಸಾವಿರಾರು ರೈತ ಕುಟುಂಬಗಳ ಜೀವನಾಧಾರಕ್ಕೆ ಗಂಭೀರ ಧಕ್ಕೆಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಮೊದಲ ಹಂತದಲ್ಲೇ ಸುಮಾರು 498.34 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಿಂದ 755 ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಇವರಲ್ಲಿ ಬಹುಪಾಲು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮುಂದಿನ ಹಂತಗಳಲ್ಲಿ 7,500 ಎಕರೆಗಿಂತಲೂ ಹೆಚ್ಚು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯಿಂದ ರೈತ ಸಮುದಾಯದಲ್ಲಿ ತೀವ್ರ ಆತಂಕ ಮನೆಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಪ್ರದೇಶವು ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಣೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಭೂಸ್ವಾಧೀನದಿಂದ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ. ಜೊತೆಗೆ ಲಕ್ಷಾಂತರ ಮರಗಳ ನಾಶ ಹಾಗೂ ಹಸಿರು ವಲಯದ ಹಾನಿಯಿಂದ ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದಾಗಿ ಕಳವಳ ವ್ಯಕ್ತಪಡಿಸಲಾಗಿದೆ.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಾಮಾಜಿಕ ಪರಿಣಾಮ ಮೌಲ್ಯಮಾಪನ (SIA) ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ (EIA) ಸೇರಿದಂತೆ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಅನುಸರಿಸಿಲ್ಲ ಎಂಬ ಆರೋಪವನ್ನೂ ಮನವಿಯಲ್ಲಿ ಮಾಡಲಾಗಿದೆ.
ಪ್ರಮುಖ ಬೇಡಿಕೆಗಳು
• ಬಿಡದಿ ಹಾಗೂ ಹಾರೋಹಳ್ಳಿ ಪ್ರದೇಶಗಳ ಭೂಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಬೇಕು.
• ಮುಂದಿನ ಹಂತಗಳಲ್ಲಿ ಉದ್ದೇಶಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು.
• ರೈತರ ಜೀವನೋಪಾಯ, ಹೈನುಗಾರಿಕೆ, ರೇಷ್ಮೆ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಸಮರ್ಪಕ ರಕ್ಷಣೆ ಒದಗಿಸಬೇಕು.
• ಸಾರ್ವಜನಿಕ ಆಸ್ತಿಗಳ ಆರ್ಥಿಕ ದುರುಪಯೋಗವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು.
ರೈತರ ಬದುಕು, ಕೃಷಿ ಮತ್ತು ಪರಿಸರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಯೋಜನೆಯನ್ನು ಮರುಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ನಿಯೋಗ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಮುಲ್ಕಿ, ವಸಂತ ಪೂಜಾರಿ, ಶಶಿರಾಜ್ ಶೆಟ್ಟಿ ಕೊಳಂಬೆ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ, ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣ, ಯುವ ಘಟಕದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅದ್ಯಕ್ಷ ರತೀಶ್ ಕರ್ಕೇರ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಜೈನ್, ಮಹಿಳಾ ಮುಖಂಡರಾದ ಸುಮತಿ ಹೆಗ್ಡೆ, ಉಪಾಧ್ಯಕ್ಷರಾದ ಶಾರದ ಶೆಟ್ಟಿ, ವಿನ್ಸೆಂಟ್ ಡಿಸೋಜ, ಪ್ರಶಾಂತ್ ಭಟ್ ಕಡಬ, ನಜೀರ್ ಸಾಮಾಣಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

