ಸುಳ್ಯ, ಜುಲೈ 12: ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆಯು ಸುಳ್ಯದ ಬ್ರಹ್ಮಶ್ರೀ ಸಭಾಂಗಣದಲ್ಲಿ ಸುಳ್ಯ ತಾಲೂಕು ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 12-07-2026 ರಂದು ಬೆಳಿಗ್ಗೆ 10.30 ರಿಂದ ಉತ್ಸಾಹಭರಿತವಾಗಿ ನಡೆಯಿತು.
ಇತ್ತೀಚೆಗೆ ನಿಧನರಾದ ತೂಗುಸೇತುವೆ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ, 2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಯೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತರೂ ಈಗಿನಿಂದಲೇ ಸಂಘಟನಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಪ್ರತಿ ತಾಲೂಕಿನಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ನಡೆಸಬೇಕು ಎಂದು ಕಳೆದ ಜಿಲ್ಲಾ ಘಟಕದ ತೀರ್ಮಾನಿಸಲಾಗಿತ್ತು. ಗ್ರಾಮ ಮಟ್ಟದಿಂದ ಬೂತ್ ಮಟ್ಟದವರೆಗೆ ಪಕ್ಷವನ್ನು ಬಲಿಷ್ಠಗೊಳಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಸುಕುಮಾರ್ ಕೋಡ್ತುಗುಳಿ ಅವರನ್ನು ಮತ್ತೊಮ್ಮೆ ಮರು ಆಯ್ಕೆ ಮಾಡಿರುವುದಾಗಿ ಜಿಲ್ಲಾ ಅಧ್ಯಕ್ಷರು ಅಧಿಕೃತವಾಗಿ ಘೋಷಿಸಿದರು. ಇದೇ ವೇಳೆ ಹೊಸದಾಗಿ ರಚನೆಯಾದ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಮೀರ್ ಸಾಹೇಬ್ ಅವರನ್ನು ನೇಮಕ ಮಾಡಿ ಶಾಲು ಹಾಕಿ ಶುಭ ಹಾರೈಸಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ. ಬಿ. ಸದಾಶಿವ ಅವರು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕುರಿತು ಸವಿಸ್ತಾರ ಮಾಹಿತಿ ನೀಡಿ, ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಯ ಪರಿಶೀಲನೆ ಕುರಿತಂತೆ ಕಾರ್ಯಕರ್ತರ ಜವಾಬ್ದಾರಿಗಳನ್ನು ವಿವರಿಸಿದರು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಪಕ್ಷದ ಹಿರಿಯ ಧುರೀಣ ನಾಗಪ್ಪ ಗೌಡ ಬಾಳೆಕಜೆ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಜನತಾ ಪಕ್ಷದ ದಿನಗಳಿಂದಲೂ ಜೆಡಿಎಸ್ ಸಂಘಟನೆಯ ಬೆಳವಣಿಗೆಗೆ ಅವರು ನೀಡಿರುವ ದೀರ್ಘಕಾಲದ ಸೇವೆ, ನಿಷ್ಠೆ ಹಾಗೂ ಸಮರ್ಪಣೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.

ಸಭೆಯಲ್ಲಿ ಹಲವು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಚಂದ್ರಶೇಖರ ಕಲ್ಲುಗದ್ದೆ ಹಾಗೂ ಅವರ ಧರ್ಮಪತ್ನಿ ಪಕ್ಷದ ಧ್ವಜ ಸ್ವೀಕರಿಸಿ ಅಧಿಕೃತವಾಗಿ ಸೇರ್ಪಡೆಗೊಂಡರು. ಜೊತೆಗೆ ಕೆಳಂಜ ವೆಂಕಟ್ರಮಣ ಗೌಡ, ಜಯಶ್ರೀ ಕೇರ್ಪಳ, ರಂಜೀತ್, ಶರತ್, ರೋಹಿತ್, ರೋಹನ್, ಮಯೂರ್, ಪ್ರಮೋದ್, ದರ್ಶನ್, ಗೌತಮ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ನೂತನ ಸದಸ್ಯರನ್ನು ಪಕ್ಷದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.

ಜೆಡಿಎಸ್ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ ಅವರು ವಿದ್ಯಾರ್ಥಿ ಘಟಕದ ಸಂಘಟನಾ ಕಾರ್ಯವನ್ನು ಶ್ಲಾಘಿಸಿದರು. ಮಾಜಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಇ ವಿಟ್ಲ ಪಕ್ಷ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದರು.
ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸಿ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಾಗುವುದು ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ನಾಸೀರ್ ಹಾಗೂ ಮುಖಂಡ ಉಮೇಶ್ ವೈ. ಗೌಡ ಅವರು ಪಕ್ಷದ ಎಲ್ಲ ಘಟಕಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಜಿಲ್ಲೆಯಲ್ಲಿ ಜೆಡಿಎಸ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಸೈಗೋಳಿ, ಪುತ್ತೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಸಾಲಿಯಾನ್,ವಿದ್ಯಾರ್ಥಿ ಜನತಾದಳ ಜಿಲ್ಲಾದ್ಯಕ್ಷ ನಿಹಾಲ್ ಎಸ್. ಕೋಡ್ತುಗುಳಿ, ಮಂಜಪ್ಪ ರೈ ಬೆಳ್ಳಾರೆ, ಶಾರದಾ ಶೆಟ್ಟಿ ಸೇರಿದಂತೆ ಜಿಲ್ಲಾ ಹಾಗೂ ವಿವಿಧ ತಾಲೂಕುಗಳ ಪ್ರಮುಖ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿದರು. ಜೆಡಿಎಸ್ ಮುಖಂಡ ಸತ್ಯನಾರಾಯಣ ವಂದನಾರ್ಪಣೆ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡುವುದು, ಯುವಜನರನ್ನು ಪಕ್ಷದತ್ತ ಸೆಳೆಯುವುದು, ಬೂತ್ ಮಟ್ಟದ ಸಂಘಟನೆಯನ್ನು ಸದೃಢಗೊಳಿಸುವುದು ಹಾಗೂ ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಇನ್ನಷ್ಟು ಬಲಿಷ್ಠ ರಾಜಕೀಯ ಶಕ್ತಿಯನ್ನಾಗಿ ರೂಪಿಸಬಹುದು ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸಿದರು.

